ಸುದ್ದಿ

ಪರಮಪೂಜ್ಯರ ಸಮ್ಮುಖದಲ್ಲಿ ಅನಾವರಣವಾಯಿತು “ಮಾಯಾವಿ” ಚಿತ್ರದ ಹಾಡುಗಳು ಹಾಗೂ ಟೀಸರ್

Share It

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಮೂಲಕ ಚಿತ್ರದುರ್ಗದ ರಘುರಾಮ್ ನಾಯಕನಾಗಿ ಪದಾರ್ಪಣೆ‌ ..

ಕನ್ನಡ ಚಿತ್ರರಂಗದಲ್ಲಿ ನೂತನ ಪ್ರತಿಭೆಗಳ ಆಗಮನ ಹೆಚ್ಚಾಗುತ್ತಿದೆ. ಈಗ ಆ ಸಾಲಿಗ ಕೋಟೆನಾಡಿನ ಹುಡುಗ ರಘು ರಾಮ್ ಸೇರ್ಪಡೆಯಾಗಿದ್ದಾರೆ. ನಾಯಕನಾಗಷ್ಟೇ ಅಲ್ಲದೆ ಇಷ್ಟ ಎಂಟರ್ಟೈನರ್ಸ್ ಮೂಲಕ “ಮಾಯಾವಿ” ಚಿತ್ರ ನಿರ್ಮಾಣ ಕೂಡ ಮಾಡಿದ್ದಾರೆ. ಶಂಕರ್ ಜಿ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಹಾಗೂ “ಆವರಿಸು” ಹಾಡಿನ‌ ಅನಾವರಣ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ಶ್ರೀಶಾಂತವೀರ ಮಹಾಸ್ವಾಮಿಗಳು ಹಾಗೂ ಶ್ರೀಈಶ್ವರಾನಂದಾಪುರಿ ಮಹಾಸ್ವಾಮಿಗಳು “ಮಾಯಾವಿ” ಚಿತ್ರದ ಟೀಸರ್ ಹಾಗೂ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಂತರ ಚಿತ್ರತಂಡದ ಸದಸ್ಯರು “ಮಾಯಾವಿ” ಬಗ್ಗೆ ಮಾತನಾಡಿದರು. ನಾನು ಈ ಹಿಂದೆ ಕೆಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದೇನೆ. ನಿರ್ದೇಶನಕನಾಗಿ ಇದು ಮೊದಲ ಚಿತ್ರ. ಚಿತ್ರದುರ್ಗದಲ್ಲಿ ಕಥೆ ಕೇಳಿದ ಮಿತ್ರ ರಘುರಾಮ್ ಹಾಗೂ ಅವರ ಪತ್ನಿ ಅಕ್ಷತ ಚಿತ್ರ ನಿರ್ಮಾಣಕ್ಕೆ ಮುಂದಾದರು.‌ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದುರ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಚಿತ್ರಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಿರ್ದೇಶಕ ಶಂಕರ್.

ನಾನು ಚಿತ್ರದುರ್ಗದವನು. ನಾಯಕನಾಗಿ ನನಗೆ “ಮಾಯಾವಿ” ಮೊದಲ ಚಿತ್ರ. ಈ ಚಿತ್ರ ನಿರ್ಮಾಣವಾಗಲು ಪ್ರಮುಖ ಕಾರಣ ನನ್ನ ಪತ್ನಿ ಡಾ||ಅಕ್ಷತ. ಮೂಲತಃ ವೈದ್ಯೆ. ಇನ್ನೂ ಶಂಕರ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆನಂತರ ಚಿತ್ರಕ್ಕೆ ಚಾಲನೆ ದೊರೆಯಿತು. ಇಂದು ಟೀಸರ್ ಹಾಗೂ “ಆವರಿಸು” ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದು, ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ‌. ಆನಂದ್ ಕಮ್ಮಸಾಗರ ಬರೆದಿದ್ದಾರೆ. ನಮ್ಮ ಮುಹೂರ್ತದ ದಿನ ಬಂದು ಹಾರೈಸಿದ್ದ ಇಬ್ಬರು ಗುರುಗಳು ಇಂದು ಆಡಿಯೋ ಹಾಗೂ ಟೀಸರ್ ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ. ಪಿ.ಮೂರ್ತಿ ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದರು ನಾಯಕ ಹಾಗೂ ನಿರ್ಮಾಪಕ ರಘುರಾಮ್.

ನಾನು ಮೂಲತಃ ಎಂಜಿನಿಯರ್. “ಶ್ರೀಜಗನ್ನಾಥದಾಸರು” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು. “ಮಾಯಾವಿ” ಚಿತ್ರದಲ್ಲೂ ನನ್ನ ಪಾತ್ರ ಚೆನ್ನಾಗಿದೆ. ನಟನೆಯ ಜೊತೆಗೆ ತಂತ್ರಜ್ಞಳಾಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ನಾಯಕಿ ನಿಶ್ಚಿತ ಶೆಟ್ಟಿ ತಿಳಿಸಿದರು.

ನಾಯಕ ರಘುರಾಮ್ ಅವರ ಪತ್ನಿ ಅಕ್ಷತ ಅವರು ಸಿನಿಮಾ ಆರಂಭವಾದ ಬಗ್ಗೆ ತಿಳಿಸಿ, ಎಲ್ಲರೂ “ಮಾಯಾವಿ” ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದರು. ಕಾರ್ಯಕಾರಿ ನಿರ್ಮಾಪಕರಾದ ಮಹೇಶ್ವರಪ್ಪ, ಹಿರಿಯ ನಟ ಸುರೇಶ್ ಬಾಬು ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Share It

You cannot copy content of this page