ಉಪಯುಕ್ತ ಸುದ್ದಿ

ತೆರಿಗೆ ಕಟ್ಟೋಕೆ ಕಿರಿಕ್ ಮಾಡಿದ್ರೆ, ಮೊಬೈಲ್ ಸ್ವಿಚ್ ಆಫ್

Share It

ಇಸ್ಲಾಮಾಬಾದ್: ಪಾಕಿಸ್ತಾನ ಆರ್ಥಿಕ ಸಂಕಷ್ಟದಿAದ ಸಲುಗುತ್ತಿರುವ ದೇಶ. ಆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಬೇಕಾದರೆ, ತೆರಿಗೆ ಸಂಗ್ರಹ ಹೆಚ್ಚಲೇಬೇಕು. ಆದರೆ, ಅಲ್ಲಿ ತೆರಿಗೆ ತಪ್ಪಿಸಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ.

ಅದಕ್ಕೀಗ ಪಾಕಿಸ್ತಾನ ಸರಕಾರ ತೆರಿಗೆ ಕಳ್ಳರ ಮೇಲೆ ಕಣ್ಣಿಡಲು ತೀರ್ಮಾನಿಸಿದೆ. ೨೦೨೩ರಲ್ಲಿ ತೆರಿಗೆ ಉಳಿಸಿಕೊಂಡ ಅರ್ಧ ಮಿಲಿಯನ್ (೫ ಲಕ್ಷಕ್ಕೂ ಅಧಿಕ) ಜನರ ಮೊಬೈಲ್ ಸಿಮ್‌ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ. ಕೇಂದ್ರೀಯ ಕಂದಾಯ ಮಂಡಳಿ (ಎಫ್‌ಬಿಆರ್) ಆದಾಯ ತೆರಿಗೆ ಇಲಾಖೆ (ಐಟಿಜಿಒ)ಗೆ ಕಳೆದ ವರ್ಷ ತೆರಿಗೆ ಕಟ್ಟದ ೫,೦೬,೬೭೧ ವ್ಯಕ್ತಿಗಳ ಮೊಬೈಲ್ ಸಿಮ್‌ಗಳ ಬಳಕೆಗೆ ನಿರ್ಬಂಧ ವಿಧಿಸಲು ಮುಂದಾಗಿದೆ.

ಈ ಬಗ್ಗೆ ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಅಥಾರಿಟಿ (ಪಿಟಿಎ) ಮತ್ತು ಎಲ್ಲಾ ಟೆಲಿಕಾಂ ಪೂರೈಕೆದಾರರಿಗೆ ನಿರ್ದೇಶನ ನೀಡಿದ್ದು, ತಮ್ಮ ಕಂಪನಿಯ ಸಿಮ್‌ಗಳನ್ನು ನಿರ್ಬಂಧಿಸಿದ ವರದಿಯನ್ನು ಮೇ ೧೫ರೊಳಗೆ ಸಲ್ಲಿಸಲು ಸೂಚಿಸಿದ್ದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ತೆರಿಗೆ ವ್ಯಾಪ್ತಿಯಲ್ಲಿ ಬರುವ ೨.೪ ಮಿಲಿಯನ್ (೨೦.೪೦ ಲಕ್ಷಕ್ಕೂ ಅಧಿಕ) ಜನರು ತೆರಿಗೆದಾರರ ಪಟ್ಟಿಯಿಂದ ನುಣುಚಿಕೊಂಡಿದ್ದಾರೆ. ಅವರನ್ನು ಗುರುತಿಸಿರುವ ಕೇಂದ್ರೀಯ ಕಂದಾಯ ಮಂಡಳಿ ಕ್ರಮ ಎದುರಿಸಲು ನೋಟಿಸ್ ಜಾರಿ ಮಾಡಿದ್ದಾಗಿ ತಿಳಿದುಬಂದಿದೆ.

ಎಫ್‌ಬಿಆರ್ ಮಾನದಂಡದ ಪ್ರಕಾರ, ತೆರಿಗೆ ವಂಚನೆ ಪಟ್ಟಿಯಲ್ಲಿನ ೨.೪ ಮಿಲಿಯನ್ ಜನರ ಪೈಕಿ ೦.೫ ಮಿಲಿಯನ್ ಮಾತ್ರ ದಂಡನೆಗೆ ಗುರಿ ಮಾಡಲು ಸರ್ಕಾರ ಮುಂದಾಗಿದೆ. ಉಳಿದವರಿಗೆ ಸದ್ಯಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಇವರೆಲ್ಲರೂ ಕಳೆದ ೩ ವರ್ಷಗಳಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವನ್ನು ಘೋಷಿಸಿಕೊಂಡಿದ್ದರು. ಎಲ್ಲರೂ ೨೦೨೩ರವರೆಗೂ ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಸಲ್ಲಿಕೆ ಮಾಡಿಲ್ಲ ಎಂಬುದು ಈಗಿರುವ ಆರೋಪ.

ಸಕ್ರಿಯ ತೆರಿಗೆದಾರರ ಪಟ್ಟಿಯ ಪ್ರಕಾರ, ಮಾರ್ಚ್ ೧, ೨೦೨೪ರವರೆಗೆ ೪.೨ ಮಿಲಿಯನ್ (೪೦ ಲಕ್ಷಕ್ಕೂ ಅಧಿಕ) ತೆರಿಗೆದಾರರಿಂದ ಐಟಿಆರ್ ಸಲ್ಲಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ೩.೮ ಮಿಲಿಯನ್ ಜನರಿಂದ ಮಾತ್ರ ರಿಟರ್ನ್ಸ್ ಸಲ್ಲಿಕೆಯಾಗುತ್ತಿತ್ತು. ೨೦೨೨ರಲ್ಲಿ ೫.೯ ಮಿಲಿಯನ್ (೬೦ ಲಕ್ಷ ಸನಿಹ) ಜನರು ತೆರಿಗೆ ಕಟ್ಟುತ್ತಿದ್ದರು. ಅದು ಕ್ರಮೇಣ ಇಳಿಕೆಯಾಗಿದೆ.


Share It

You cannot copy content of this page