ಬೆಂಗಳೂರು: SC/ST ಕಾಯಿದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೇಲಿನ ದೌರ್ಜನ್ಯ ತಡೆಯಲು ಜಾರಿಗೊಳಿಸಲಾಗಿದ್ದು, ಇದು ಮತಾಂತರವಾದವರಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ತಮಗೆ ಜಾತಿನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಚರ್ಚ್ ನ ಪಾದ್ರಿಯೊಬ್ಬರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಂಧ್ರಪ್ರದೇಶದ ಹೈಕೊರ್ಟ್ ನ ನ್ಯಾಯಮೂರ್ತಿ ಎನ್. ಹರಿನಾಥ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದ್ದು, ಇದೊಂದು ಮೈಲುಗಲ್ಲಾಗುವ ತೀರ್ಪಾಗಿದೆ.
ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರೋಧಿಸಿಯೇ ಕ್ರೈಸ್ತ ಧರ್ಮಕ್ಕೆ ಕೆಲವರು ಮತಾಂತರ ಆಗುತ್ತಾರೆ. ಹೀಗೆ, ಮತಾಂತರ ಆದ ನಂತರವೂ SC/ ST ದೌರ್ಜನ್ಯ ತಡೆ ಕಾನೂನು ಬಳಕೆಗೆ ಪ್ರಯತ್ನ ನಡೆಸುತ್ತಾರೆ. ಬೇರೆ ಧರ್ಮಕ್ಕೆ ಮತಾಂತರ ಆದ ನಂತರ ಈ ಕಾಯಿದೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ಕೆಲವರು ಮತಾಂತರ ಆದ ನಂತರವೂ SC/ST ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ. ಒಂದು ವೇಳೆ ಇಂತಹ ಪ್ರಮಾಣಪತ್ರ ಪಡೆದಿದ್ದರೂ ದೌರ್ಜನ್ಯ ಪ್ರಕರಣದಲ್ಲಿ ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಗುಂಟೂರು ಜಿಲ್ಲೆಯ ಆನಂದ್ ಎಂಬುವವರು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದು, ನಂತರ ಚರ್ಚ್ ಪಾದ್ರಿಯಾಗಿಯೂ ನೇಮಕವಾಗಿದ್ದರು. ಇತ್ತೀಚೆಗೆ ಮೇಲ್ಜಾತಿಯ ಅಕ್ಕಿಲ ರಾಮಿರೆಡ್ಡಿ ತಮಗೆ ಜಾತಿನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ದೂರು ರದ್ದುಗೊಳಿಸುವಂತೆ ರಾಮಿರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.