ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಈ ಅಮಾನತು ಆದೇಶ ಜಾರಿಗೊಳಿಸಿದ್ದಾರೆ.
ಮೇ 23ರ ರಾತ್ರಿ ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯಿಂದ ಕಚೇರಿಯಲ್ಲಿದ್ದ ಸೋಫಾ, ಎಸಿ ಸೇರಿ ಒಳಾಂಗಣ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರ ನೇಮಕಾತಿಯಿಂದ ಆಕ್ರೋಶಗೊಂಡ ಮಂಜುಳಾ ಗೂಳಿ ಅವರ ಪತಿ ಶಂಕರ್ ಗೂಳಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಉಚ್ಛಾಟನೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯದ ಜವಾಬ್ದಾರಿ ಗಮನದಲ್ಲಿಟ್ಟುಕೊಂಡು ಮಂಜುಳಾ ಗೂಳಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಪೊಲೀಸ್ ಕಾರ್ಯಾಚರಣೆ: ಯಾದಗಿರಿ ನಗರ ಪೊಲೀಸರು ಶಂಕರ್ ಗೂಳಿಯನ್ನು ಈಗಾಗಲೇ ಬಂಧಿಸಿದ್ದಾರೆ. ಶಂಕರ್‌ಗೆ ಸಾಥ್ ನೀಡಿದ್ದ ಆರೋಪಿತ ಬಾಬುಗೌಡ ಎಂಬಾತ ತಲೆಮರೆಸಿಕೊಂಡಿದ್ದು, ಅವನ ಹುಡುಕಾಟ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಕೃತ್ಯಗಳನ್ನ ಸಹಿಸುವುದಿಲ್ಲ ಎಂದು ಸೌಮ್ಯ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕವು ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಹೊಸ ನಾಯಕತ್ವದೊಂದಿಗೆ ಮುನ್ನಡೆಯಲಿದೆ ಎಂದು ತಿಳಿಸಿದೆ.
ತನಿಖೆಯ ಮುಂದುವರಿಕೆ: ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಇತರ ಸಂಭಾವ್ಯ ಆರೋಪಿಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಘಟನೆಯಿಂದ ಯಾದಗಿರಿಯಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.