ಅಪರಾಧ ಸುದ್ದಿ

ಮಂಗಳೂರಿನಲ್ಲಿ ಯುವಕನ ಭೀಕರ ಹತ್ಯೆ:15 ಮಂದಿಯ ವಿರುದ್ಧ ಪ್ರಕರಣ ದಾಖಲು

Share It

ಮಂಗಳೂರು:ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ನಡೆದ ಅಬ್ದುಲ್ ರಹೀಂ (32) ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡ ಕಲಂದರ್ ಶಫಿಯಿಂದ ಪಡೆದ ಮಾಹಿತಿ ಆಧಾರದ ಮೇಲೆ 15 ಜನರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ದಾಳಿಯಲ್ಲಿ ಅಬ್ದುಲ್ ರಹೀಂ ಮೃತಪಟ್ಟಿದ್ದು, ಕಲಂದರ್ ಶಫಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೊಹಮ್ಮದ್ ನಿಸಾರ್ ದಾಖಲಿಸಿದ ದೂರಿನ ಪ್ರಕಾರ, ಅಬ್ದುಲ್ ರಹೀಂ ಮತ್ತು ಕಲಂದರ್ ಶಫಿ ಇಬ್ಬರು ಕುರಿಯಾಳ ಗ್ರಾಮದ ಈರಾಕೋಡಿಯ ರಾಜೀವಿ ಎಂಬವರ ಮನೆ ಬಳಿ ಪಿಕ್‌ಅಪ್ ವಾಹನದಲ್ಲಿ ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹೀಂನನ್ನು ಆರೋಪಿಗಳು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರ ಗಾಯಗೊಂಡ ಅಬ್ದುಲ್ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಂದರ್ ಶಫಿ ಕೂಡ ದಾಳಿಗೊಳಗಾದರೂ, ಸ್ಥಳೀಯರ ಕೂಗಾಟದಿಂದ ಆರೋಪಿಗಳು ಶಫಿ ಮೇಲಿನ ದಾಳಿಯನ್ನು ಅರ್ಧಕ್ಕೆ ನಿಲ್ಲಿಸಿ ಪರಾರಿಯಾಗಿದ್ದಾರೆ.

ಗಾಯಾಳು ಕಲಂದರ್ ಶಫಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಯಂಬುಲೆನ್ಸ್‌ನಲ್ಲಿ ಮೊಹಮ್ಮದ್ ನಿಸಾರ್‌ಗೆ ನೀಡಿದ ಮಾಹಿತಿ ಆಧಾರದ ಮೇಲೆ ದೂರು ದಾಖಲಾಗಿದೆ. ದೂರಿನಲ್ಲಿ ಆರೋಪಿಗಳ ಪೈಕಿ ಇಬ್ಬರು ಅಬ್ದುಲ್ ರಹೀಂನ ಪರಿಚಯಸ್ಥರಾದ ದೀಪಕ್ ಮತ್ತು ಸುಮಿತ್ ಎಂದು ಗುರುತಿಸಲಾಗಿದೆ. ಬಂಟ್ವಾಳ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103, 109, 118(1), 118(2), 190, 191(1), 191(2), ಮತ್ತು 191(3) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಐದು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಡಿವೈಎಸ್‌ಪಿ ವಿಜಯ್ ಪ್ರಕಾಶ್ ನೇತೃತ್ವದ ಈ ತಂಡಗಳಲ್ಲಿ ಮಂಗಳೂರು ನಗರ ಸಿಸಿಬಿ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆ ಸಿಬ್ಬಂದಿ ಸೇರಿದ್ದಾರೆ. ಜುಮ್ಮಾ ಮಸೀದಿ ಕಾರ್ಯದರ್ಶಿಯಾಗಿದ್ದ ಅಬ್ದುಲ್ ರಹೀಂ ಪಿಕ್‌ಅಪ್ ವಾಹನದ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಪೊಲೀಸರು ಆರೋಪಿಗಳ ಬಗ್ಗೆ ಕೆಲವು ಸುಳಿವುಗಳನ್ನು ಕಲೆಹಾಕಿದ್ದಾರೆ. ಗಾಯಾಳು ಶಫಿಯಿಂದ ಪಡೆದ ಮಾಹಿತಿ ತನಿಖೆಗೆ ನಿರ್ಣಾಯಕವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.


Share It

You cannot copy content of this page