ಬೆಂಗಳೂರು: ಕರ್ನಾಟಕದಲ್ಲಿ ಸೌಕರ್ಯ ಕೊರತೆ ಇದೆ ನಮಗೆ ಹಿಂದೂಸ್ತಾನ್ ಏರ್ಕ್ರಾಫ್ಟ್ ಕಂಪನಿಯ ಘಟಕವನ್ನು ವರ್ಗಾಯಿಸಿಕೊಡಿ ಎಂದು ಕೇಂದ್ರವನ್ನು ಕೇಳಿರುವ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ನಡೆ
ಬೇಜವಾಬ್ದಾರಿಯಿಂದ ಕೂಡಿದ ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಕಳೆದೊಂದು ದಿನದ ಹಿಂದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯನ್ವಯ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಅಂದರೆ ಅರ್ಥ ನಮ್ಮ ರಾಜ್ಯವು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.
HAL ನಮ್ಮ ರಾಜ್ಯದ ಹೆಮ್ಮೆ , ದಶಕಗಳಿಂದ ಈ ಸಂಸ್ಥೆಯೊಂದಿಗೆ ನಾಡಿನ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೊಸ ಘಟಕಕ್ಕೆ ಅಗತ್ಯವಿರುವ ಭೂಮಿ, ಸೌಲಭ್ಯಗಳನ್ನು ಸರ್ಕಾರವು ನೀಡಲು ಸಿದ್ದವಿದ್ದು, ಯಾವುದೇ ಕಾರಣಕ್ಕೂ ನೆರೆರಾಜ್ಯಕ್ಕೆ ವರ್ಗಾಯಿಸಲು ಬಿಡಬಾರದು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರು, ರಾಜ್ಯದ ಇತರೆ ಸಂಸದರು ಹಾಗೂ ಸ್ಥಳೀಯ ಬಿಜೆಪಿ ನಾಯಕರು ಈ ಬಗ್ಗೆ ಯಾವುದೇ ಚಕಾರವೆತ್ತದೆ ಇರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ.
ಎಲ್ಲಾ ಸಂಸದರು ಒಕ್ಕೊರಲಿನಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ, ನಮ್ಮ ರಾಜ್ಯದಲ್ಲಿಯೇ HAL ಘಟಕ ಮುಂದುವರಿಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕು ಎಂದು ಒತ್ತಾಯಿಸಿದ್ದಾರೆ.