ಹೈದರಾಬಾದ್: ಓಬಳಾಪುರಂ ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಸಿಬಿಐ ಕೋರ್ಟ್ ನಿಂದ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸಿಬಿಐ ಕೋರ್ಟ್ ಆದೇಶಕ್ಕೆ ಹೈದರಾಬಾದ್ ನ ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಹಲವು ಷರತ್ತುಗಳನ್ನ ವಿಧಿಸಿ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿದೆ.
ಷರತ್ತುಬದ್ಧ ಜಾಮೀನು ಪಡೆಯಲು ಜ.ರೆಡ್ಡಿ ಅವರು
10 ಲಕ್ಷ ರೂಪಾಯಿ ಮೌಲ್ಯದ 2 ಶ್ಯೂರಿಟಿ ನೀಡಲು ಹೈಕೋರ್ಟ್ ಸೂಚಿಸಿದೆ. ಜೊತೆಗೆ ಭಾರತ ಬಿಟ್ಟು ಹೋಗಲು ತೆಲಂಗಾಣ ಹೈಕೋರ್ಟ್ ಜನಾರ್ದನ ರೆಡ್ಡಿಗೆ ಅನುಮತಿ ನೀಡಿಲ್ಲ ಮತ್ತು ರೆಡ್ಡಿ ಅವರ ಪಾಸ್ಪೋರ್ಟ್ ವಶಕ್ಕೆ ಪಡೆಯಲು ಸಹ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಆಂಧ್ರಪ್ರದೇಶದಲ್ಲಿ ಈ ಹಿಂದೆ ಸಿಎಂ ಆಗಿದ್ದ ದಿವಂಗತ ವೈ.ಎಸ್ ರಾಜಶೇಖರರೆಡ್ಡಿ ಹಾಗೂ ಕರ್ನಾಟಕದಲ್ಲಿ ಆಗ ಸಿಎಂ ಆಗಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓಬಳಾಪುರಂ ಅಕ್ರಮ ಗಣಿಕಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಹಿಂದಿನ ಅವಿಭಜಿತ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಗಡಿಗೆ ಹೊಂದಿಕೊಂಡ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಗಣಿಗಾರಿಕೆ ಮಂಜೂರಾತಿ ವೇಳೆ ಇಲಾಖೆಗಳಿಂದ ಅಕ್ರಮವಾಗಿದೆ. ಅರಣ್ಯ ಇಲಾಖೆ, ಗಣಿ ಇಲಾಖೆಯಿಂದ ಅಕ್ರಮ ಆಗಿದೆ ಎಂದು ಆರೋಪಿಸಲಾಗಿತ್ತು.
ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 884 ಕೋಟಿ ಅಕ್ರಮ ಎಸಗಿರೋದು ಸಾಬೀತಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಆಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐನ ವಿಶೇಷ ಕೋರ್ಟ್, ಶ್ರೀನಿವಾಸರೆಡ್ಡಿ, ಜನಾರ್ದನರೆಡ್ಡಿ, ಅಲಿಖಾನ್, ಸಬಿತಾ ಇಂದ್ರಾರೆಡ್ಡಿ, ಕೃಪಾನಂದ ದೋಷಿಗಳು ಎಂದು ಹೇಳಿತ್ತು. ಶಿಕ್ಷೆಯ ಪ್ರಮಾಣವಾಗಿ 5 ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿತ್ತು.