ಬೆಂಗಳೂರು: ಪತ್ನಿ ಬದುಕಿದ್ದರೂ ಆಕೆಯ ಕೊಲೆಯ ಕೇಸಲ್ಲಿ ಅಮಾಯಕನೊಬ್ಬನಿಗೆ ಶಿಕ್ಷೆ ಕೊಡಿಸಿ ಜೈಲಿಗೆ ಕಳುಹಿಸಿದ್ದ ಪ್ರಕರಣದಲ್ಲಿ ಮೂವರು ಇನ್ಸ್ ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.
ಪತ್ನಿಯ ಕೊಲೆ ಮಾಡದಿದ್ದರೂ, ಕುಶಾಲನಗರದ ಆದಿವಾಸಿ ಬಡಾವಣೆಯ ಸುರೇಶ್ ಎಂಬಾತನನ್ನು ಬಂಧಿಸಿದ್ದ ಪೊಲೀಸರು ಆತನಿಗೆ ಎರಡು ವರ್ಷ ಜೈಲು ಶಿಕ್ಷೆಯಾಗುವಂತೆ ಮಾಡಿದ್ದರು. ಅವರ ವಿರುದ್ಧ ಬೈಲುಕುಪ್ಪೆ ಇನ್ಸ್‌ಪೆಕ್ಟರ್ ಮತ್ತು ಪ್ರಕರಣದ ತನಿಖಾಧಿಕಾರಿ ಬಿ.ಜಿ. ಪ್ರಕಾಶ್ ಸುಳ್ಳು ಪ್ರಕರಣ ಸೃಷ್ಟಿಸಿ, ಆತನನ್ನು ಬಂಧಿಸಿದ್ದರು.
ತನಿಖಾ ತಂಡದಲ್ಲಿದ್ದ ಪ್ರೊಬೆಷನರಿ ಪಿಎಸ್‌ಐ ಮಹೇಶ್ ಕುಮಾರ್ ಮತ್ತು ಎಸ್‌ಐ ಪ್ರಕಾಶ್ ಯತ್ತಿಮನಿ ಸೇರಿ ಮೂವರು ಅಧಿಕಾರಿಗಳು ಸುರೇಶ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿ ಆನನನ್ನು ಜೈಲಿಗೆ ಕಳುಹಿಸಿದ್ದರು. ಮೈಸೂರು ಜಿಲ್ಲೆಯ ಪರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಸಿಕ್ಕಿದ್ದ ಅನಾಥ ಶವವೊಂದನ್ನಿಟ್ಟುಕೊಂಡು, ಆಕೆಯ ಪತ್ನಿ ಕೊಲೆಯಾಗಿದೆ ಎಂದು ಆರೋಪಿಸಿ ಅವನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
2020ರ ಅಕ್ಟೋಬರ್‌ನಲ್ಲಿ ನಡೆದ ಪ್ರಕರಣ ಸಂಬಂಧ ಆತನ ವಿರುದ್ಧ ಮೈಸೂರಿನ 5ನೇ ಹಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 9 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿತ್ತು. ನಾನು ಪತ್ನಿಯನ್ನು ಕೊಂದಿಲ್ಲ, ಆಕೆ ಬದುಕಿದ್ದಾಳೆ ಎಂದು ಸುರೇಶ್ ವಾದಿಸಿದ್ದರು. ಮಕ್ಕಳು ಕೂಡ ತಮ್ಮ ತಾಯಿ ಸತ್ತಿಲ್ಲ ಎಂದು ಹೇಳಿಕೆ ನೀಡಿದ್ದರೆ, ಅಕ್ಕಪಕ್ಕದ ಮನೆಯವರು ಕೂಡ ಆಕೆ ಸತ್ತಿಲ್ಲ ಎಂದು ಹೇಳಿದ್ದರು.
ಅನಂತರ ಕಳೆದ ಏ.2ರಂದು ಆತನ ಪತ್ನಿಯೇ ನ್ಯಾಯಾಧೀಶರ ಮುಂದೆ ಹಾಜರಾಗಿ ವಿವರಣೆ ನೀಡಿದ್ದಳು. ಆದರೆ, ಪೊಲೀಸರ ಕೆಲಸದಿಂದ ಕೊಲೆ ಆರೋಪ ಹೊತ್ತಿದ್ದ ಸುರೇಶ್ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದ್ದ, ಹೀಗಾಗಿ ಮೂವರು ಪೊಲೀಸ್ ಅಧಿಕಾರಿಗಳನ್ನು ಸರಕಾರ ಅಮಾನತು ಮಾಡಿ ಆದೇಶಿಸಿದೆ.