ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬ್ಯಾಸ್ಡನ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ನಡುವಿನ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯ ಆರಂಭವಾಗಿದೆ.
ಎಡ್ಜ್ ಬ್ಯಾಸ್ಡನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ಶುಭಮಾನ್ ಗಿಲ್ ಹೀಗೆಂದರು: “ಟಾಸ್ ಗೆದ್ದು ನಾವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದೆವು. ಆದರೆ ಇಂಗ್ಲೆಂಡ್ ಈಗ ಟಾಸ್ ಗೆದ್ದು ನಮಗೆ ಬ್ಯಾಟಿಂಗ್ ನೀಡಿದೆ. ಆದ್ದರಿಂದ ನಾವು ಮೊದಲು ಬ್ಯಾಟಿಂಗ್ ಮಾಡುವಾಗ ಬಹಳ ಎಚ್ಚರಿಕೆಯಿಂದ ಆಟವಾಡಬೇಕಿದೆ” ಎಂದು ಹೇಳಿದರು.
ಆದಾಗ್ಯೂ ಟೀಂ ಇಂಡಿಯಾ ಮೊದಲ ಟೆಸ್ಟ್ ಸೋತ ಕಾರಣ 2ನೇ ಟೆಸ್ಟ್ ನಲ್ಲಿ 3 ಬದಲಾವಣೆ ಮಾಡಿದೆ. ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯರಾದ ಕಾರಣ ಮತ್ತೊಬ್ಬ ವೇಗಿ ಆಕಾಶ್ ದೀಪ್ ಆಡುತ್ತಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಹೀನಾಯ ಬ್ಯಾಟಿಂಗ್ ನಡೆಸಿದ ಸಾಯಿ ಸುದರ್ಶನ್ ಬದಲಿಗೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 2ನೇ ಟೆಸ್ಟ್ ನಲ್ಲಿ ಆಡಲಿದ್ದಾರೆ. ಅದೇ ರೀತಿ ಶಾರ್ದೂಲ್ ಠಾಕೂರ್ ಬದಲಿಗೆ ಆಂಧ್ರಪ್ರದೇಶದ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ 11ರ ಟೀಂ ಇಂಡಿಯಾ ಸೇರಿದ್ದಾರೆ.
ಈಗಾಗಲೇ ಮೊದಲ ಟೆಸ್ಟ್ ಗೆದ್ದು 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಯಿಂದ ಮುನ್ನಡೆ ಗಳಿಸಿದೆ. ಹೀಗಾಗಿ ಟೀಂ ಇಂಡಿಯಾ ಹೇಗಾದರೂ ಮಾಡಿ 2ನೇ ಟೆಸ್ಟ್ ಗೆಲ್ಲಲು ಮುಂದಾಗಿದೆ.
ಆದಾಗ್ಯೂ ಕರ್ನಾಟಕ ಪರವಾಗಿ ವೇಗದ ಬೌಲರ್ ಪ್ರಸಿದ್ಧ ಕೃಷ್ಣ, ವಿಕೆಟ್ ಕೀಪರ್-ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕೆ.ಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕರುಣ್ ನಾಯರ್ ಟೀಂ ಇಂಡಿಯಾ ಪರ ಮತ್ತೆ ಆಡುವ ಅವಕಾಶ ಪಡೆದಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಿದೆ. ಓಪನರ್ ಗಳಾಗಿ ಕರ್ನಾಟಕದ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಹೆದರದೆ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ನಡೆಸುತ್ತಿದ್ದಾರೆ.