ಬೆಂಗಳೂರು: ಹಾಸನದಲ್ಲಿ ನಡೆಯುತ್ತಿರುವ ಸರಣಿ ಹಾರ್ಟ್ ಅಟ್ಯಾಕ್ ಸರಣಿ ಸಾವಿಗೆ ಸರಕಾರ ನೇಮಿಸಿರುವ ಕಾರಣ ಕಂಡುಹಿಡಿದಿದ್ದು, ಜಿಲ್ಲೆಯಲ್ಲಿನ ಅತಿಯಾದ ಮಾಂಸ ಸೇವನೆ ಕೂಡ ಸಾವಿಗೆ ಕಾರಣ ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.
ರಾಜ್ಯದಲ್ಲಿಯೇ ಹಾಸನ ಜಿಲ್ಲೆ ಅತಿ ಹೆಚ್ಚು ಮಾಂಸಾಹಾರ ಸೇವನೆ ಮಾಡುವ ಜಿಲ್ಲೆ ಎನಿಸಿಕೊಂಡಿದೆ. ಮದುವೆ, ತಿಥಿ, ಹಬ್ಬ ಹರಿದಿನಗಳು ಸೇರಿದಂತೆ ಇಲ್ಲಿನ ಪ್ರತಿ ಕಾರ್ಯಕ್ರಮವೂ ಮಾಂಸಾಹಾರವಿಲ್ಲದೆ ಕೊನೆಯಾಗುದೇ ಇಲ್ಲ. ಇದು ಹಾಸನ ಜಿಲ್ಲೆಯಲ್ಲಿಯೇ ಅತಿಹೆಚ್ಚು ಹೃದಯಾಘಾತ ಸಂಭವಿಸಲು ಕಾರಣ ಎಂದು ಮೊದಲ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ 42 ದಿನದಲ್ಲೇ 26 ಮಂದಿ ಹೈದಯಾಘಾತಕ್ಕೆ ಬಲಿ ಆಗಿದ್ದಾರೆ. ಸಾವಿನ ತನಿಖೆಗೆ ತಜ್ಞರ ಸಮಿತಿಯೂ ರಚಿಸಲಾಗಿದೆ. ಈ ಮಧ್ಯೆ ಹೃದಯಾಘಾತದ ಬಗ್ಗೆ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಸಿದ್ಧ ಪಡಿಸಿದ್ದು, ವರದಿಯಲ್ಲಿ ಈ ಶಾಕಿಂಗ್ ಅಂಶ ಪತ್ತೆ ಆಗಿದೆ.
ಅತಿಯಾದ ಬೊಜ್ಜು, ಮಾಂಸ ಸೇವನೆ, ಧೂಮಪಾನ, ಮದ್ಯಪಾನ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಸಾವು ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಆಳವಾದ ಅಧ್ಯಯನ ಮಾಡಲು ತಾಂತ್ರಿಕ ಸಮಿತಿ ನಿರ್ಧರಿಸಿದೆ. ಇನ್ನು ವರದಿ ಸಲ್ಲಿಸಲು ಕೇವಲ ಒಂದು ವಾರ ಬಾಕಿ ಇದ್ದು, ಅಷ್ಟರ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಈ ಸರಣಿ ಸಾವುಗಳಿಂದ ಸರ್ಕಾರ ಆತಂಕಗೊಂಡಿದ್ದು, ಸಾವಿಗೆ ಕಾರಣ ತಿಳಿಯಲು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. 10 ದಿನದಲ್ಲೇ ವರದಿ ನೀಡುವಂತೆ 12 ಜನ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ಪ್ರಾಥಮಿಕ ವರದಿಯನ್ನು ತಜ್ಞರು ಸಿದ್ಧ ಪಡಿಸಿದ್ದಾರೆ.