ಬೆಂಗಳೂರು: ಆಗಾಗ ಮುನಿಸು ತೋರಿಸುವ ಶಾಸಕರ ಮುನಿಸು ತಣಿಸಲು ಸಿಎಂ ಅನುದಾನದ ಅಸ್ತ್ರ ಪ್ರಯೋಗ ಮಾಡಿದ್ದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಗ್ಯಾರಂಟಿ ಅನುಷ್ಠಾನದ ನಂತರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಕೆಲವು ಶಾಸಕರು ಬಹಿರಂಗವಾಗಿ ಆಕೋಶ ವ್ಯಕ್ತಪಡಿಸಿದ್ದರು. ಇದು ಪಕ್ಷಕ್ಕೆ ಮತ್ತು ಸರಕಾರಕ್ಕೆ ಡ್ಯಾಮೇಜ್ ಆಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರಿಗೆ ತಲಾ 50 ಕೋಟಿ ಅನುದಾನ ನೀಡುವ ಮೂಲಕ ಅವರನ್ನು ತಣ್ಣಗಾಗಿಸುವ ಪ್ರಯತ್ನವನ್ನು ಸಿಎಂ ಮಾಡಿದ್ದಾರೆ.
ಎಲ್ಲ ಕಾಂಗ್ರೆಸ್ ಶಾಸಕರಿಗೆ ಸಿಎಂ ಪತ್ರ ಬರೆದಿದ್ದು, ಲೋಕೋಪಯೋಗಿ ಇಲಾಖೆಯಿಂದ 37.50 ಕೋಟಿ ಹಾಗೂ ಶಾಸಕರ ವಿವೇಚನಾಧಿಕಾರದ ಅಡಿ ಹಾಗೂ ಇತರೆ ಕಾಮಗಾರಿಗಳಿಗಾಗಿ 12.50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.
ಅನುದಾನ ಬಿಡುಗಡೆ ಮಾಡುವ ಮೊದಲು ಜು.30 ಮತ್ತು 31ರಂದು ಎಲ್ಲ ಶಾಸಕರ ಜತೆಗೆ ಸಿಎಂ ಸಭೆ ನಡೆಸಲಿದ್ದು, ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. ನಂತರವೇ ಅನುದಾನ ಬಿಡುಗಡೆಯಾಗಲಿದೆ.