ಬೆಳಗಾವಿ: ಸಾರಿಗೆ ಇಲಾಖೆ ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ತಡೆಗೆ ಸರಕಾರ ಮುಂದಾಗಿದ್ದು, ಸಾರ್ವಜನಿಕರೇ ನೇರವಾಗಿ ಅಧಿಕಾರಿಗಳನ್ನು ಭೇಟಿ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು “ಮಧ್ಯವರ್ತಿಗಳು ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ. ಇಂದಿನಿಂದ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಮಧ್ಯವರ್ತಿಗಳ ಪ್ರವೇಶ ನೂರಕ್ಕೆ ನೂರರಷ್ಟು ನಿಷೇಧಿಸಿ, ಸಾರ್ವಜನಿಕರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶ” ಎಂದು ಹೇಳಿದರು.
“ಹೊಸ ಕಟ್ಟಡದಲ್ಲಿರುವ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ 24 ಗಂಟೆಗಳೊಳಗೆ ಸಾರಿಗೆ ಸೇವೆಗಳನ್ನು ಒದಗಿಸಬೇಕು. ಯಾವುದೇ ವಿಳಂಬಕ್ಕೆ ಅವಕಾಶ ಇಲ್ಲ. ಕರ್ಕಶ ಹಾರ್ನ್ ಮತ್ತು ಬ್ಲೈಂಡಿಂಗ್ ಲೈಟ್ ಇರುವ ವಾಹನಗಳ ಮೇಲೆ ಫೋರ್ ಲೇನ್‌ಗಳಲ್ಲಿ ದಂಡ ವಿಧಿಸಲಾಗುವುದು. ಹಳೆಯ ವಾಹನಗಳ ಆರ್.ಸಿ. ನವೀಕರಣ ಕಡ್ಡಾಯಗೊಳಿಸಲಾಗುವುದು” ಎಂದು ಅವರು ಹೇಳಿದರು.
“ಟ್ರ‍್ಯಾಕ್ಟರ್‌ಗಳಲ್ಲಿ ಅತೀ ಭಾರ ಮತ್ತು ಜೋರಾದ ಸ್ಪೀಕರ್‌ಗಳ ಬಳಕೆಯನ್ನು ತಕ್ಷಣ ನಿಷೇಧ ಮಾಡಲಾಗುತ್ತಿದೆ. ವಾಹನ ಚಾಲನಾ ಪರವಾನಿಗೆಗೆ ಕಠಿಣ ಪರೀಕ್ಷೆಗಳನ್ನು ಜಾರಿಗೆ ತರಲಾಗುವುದು. ಅಪಾಯಕಾರಿ ಚಾಲಕರಿಗೆ ಪರವಾನಗಿ ಶಾಶ್ವತ ರದ್ದು ಮಾಡಲಾಗುವುದು” ಎಂದರು.
ಬೆಳಗಾವಿಗೆ 300 ಹೊಸ ಬಸ್
“ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್‌ಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು. ಅದರಲ್ಲಿ ನಗರ ಸುತ್ತಮುತ್ತ ಸಂಚಾರಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಒದಗಿಸಲಾಗುವುದು. ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು