ಉಪಯುಕ್ತ ಸುದ್ದಿ

ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಿಸಿದ್ದ ಸರಕಾರಿ ನೌಕರರ ಅಮಾನತು

Share It

ಬೆಂಗಳೂರು: ಸಾರಿಗೆ ಇಲಾಖೆ (RTO) ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟಿದ ಹಬ್ಬ ಆಚರಿಸಿದ ಸಿಬ್ಬಂದಿಗಳ ಅಮಾನತಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದು, ಯಾವುದೇ ನಿಯಮ ಬಾಹಿರ ಚಟುವಟಕೆಗಳನ್ನು ಸಹಿಸುವುದಿಲ್ಲ‌ ಎಂಬ ಸಂದೇಶ ರವಾನೆ ಮಾಡಿದ್ದಾರೆ.

ಇದೇ ಜುಲೈ 11 ರಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಕಲೇಶಪುರ ಕಛೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬದ ಆಚರಣೆ ಮಾಡಿದ್ದು,  ಯೂಟ್ಯೂಬ್‌ನಲ್ಲಿ ಪ್ರಸಾರವಾದ ವೀಡಿಯೋ ತುಣುಕು  ಅದೇ ದಿನ ದೃಶ್ಯ ಮಾಧ್ಯಮ/ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಇದರ ಮಾಹಿತಿ ಪಡೆದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಸ್ತು ಕ್ರಮ‌ ತೆಗೆದು ಕೊಳ್ಳಲು  ಆಯುಕ್ತರು, ಸಾರಿಗೆ  ಇಲಾಖೆರವರಿಗೆ ಸೂಚಿಸಿದ್ದರು.

ಅದರಂತೆ ಎಸ್.ಎನ್. ಮಧುರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆಡಳಿತ), ಎಂ.ಕೆ. ಗಿರೀಶ್, ಅಧೀಕ್ಷಕರು ಮತ್ತು ಎನ್. ಆರ್.ಆಶಾ,‌ ಮೋಟಾರು ವಾಹನ‌ ನಿರೀಕ್ಷಕರುಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದ್ದು, ವಿವರಣೆಯು ಸಮರ್ಪಕವಾಗಿಲ್ಲದ ಕಾರಣ ಹಾಗೂ ಕಛೇರಿ ವೇಳೆಯಲ್ಲಿಯೇ ಒಬ್ಬ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬವನ್ನು ಕಛೇರಿಯಲ್ಲಿಯೇ ಆಚರಣೆ ಮಾಡಿರುವುದಲ್ಲದೇ, ತಾವೇ ಖುದ್ದು ಹಾಜರಾಗಿ ಶಾಲು ಹೊದಿಸಿ ಶುಭ ಹಾರೈಸಿರುವುದು ಕಂಡುಬಂದಿದ್ದು, ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ಈ ರೀತಿಯ ಕಾರ್ಯವು ಕಾನೂನು/ನಿಯಮ ಬಾಹಿರವಾಗಿರುತ್ತದೆ ಎಂದು‌ ಮನಗಂಡು  ಆಯುಕ್ತರು, ಸಾರಿಗೆ ಇಲಾಖೆ ರವರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿರುತ್ತಾರೆ.


Share It

You cannot copy content of this page