ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಆರಂಭಿಸಿದ್ದು, ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿದೆ.
ಎಸ್‌ಐಟಿ ತಂಡ ಈಗಾಗಲೇ ಮಂಗಳೂರು ತಲುಪಿದ್ದು, ಅನೇಕರ ಹೇಳಿಕೆಗಳನ್ನು ಪಡೆದುಕೊಂಡಿತ್ತು. ಇಂದು ಪಾಪಪ್ರಜ್ಞೆಯಿಂದ ನ್ಯಾಯಾಲಯದ ಮುಂದೆ ಶರಣಾಗಿದ್ದ ವ್ಯಕ್ತಿ ತನ್ನ ವಕೀಲರ ಜತೆಗೆ ಬಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆತ ಶವ ಎಲ್ಲೆಲ್ಲಿ ಹೂತಿಟ್ಟಿದ್ದಾನೆ. ಅದನ್ನು ತೋರಿಸಲು ಈಗ ಸಮರ್ಥನಿದ್ದಾನಾ? ಯಾರ ಆದೇಶದ ಮೇರೆಗೆ ಶವವನ್ನು ಹೂತಿಡಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆಲ್ಲ ಆ ವ್ಯಕ್ತಿ ಸಮರ್ಥವಾಗಿ ಉತ್ತರ ನೀಡಿದ್ದು, ತಾನು ಶವಗಳನ್ನು ಹೂತಿಟ್ಟಿರುವ ಜಾಗವನ್ನು ತೋರಿಸುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ದೇಶ-ವಿದೇಶದಲ್ಲಿ ಸಂಚಲನ ಮೂಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಡಾ. ಮೊಹಾಂತಿ ನೇತೃತ್ವದ ತಂಡ ತನಿಖೆ ಆರಂಭಿಸಿದೆ. ಈ ಪ್ರಕರಣ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಸತ್ಯಾಂಶ ಹೊರಗೆ ತೆಗೆಯುವ ಪ್ರಯತ್ನದ ಭಾಗವಾಗಿ ಎಸ್‌ಐಟಿ ಕಣಕ್ಕಿಳಿದಿದೆ.