ಬೆಂಗಳೂರು: ದಲಿತ ಸಿಎಂ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಸೆ.2ರಂದು ದಲಿತ ಸಚಿವರು ಮತ್ತು ಶಾಸಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸಿಎಂ ಬದಲಾವಣೆ ವಿವಾದ ತಣ್ಣಗಾದ ಬೆನ್ನಲ್ಲೇ ದಲಿತ ಸಚಿವರು ಮತ್ತು ಶಾಸಕರು ಒಗ್ಗಟ್ಟು ಪ್ರದರ್ಶನಕ್ಕೆ ತೀರ್ಮಾನಿಸಿದ್ದು, ಆ ಮೂಲಕ ದಲಿತ ಸಿಎಂ ಹಕ್ಕೊತ್ತಾಯ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದು, ಸಭೆಯಲ್ಲಿ ದಲಿತ ಸಮುದಾಯದ ಸಚಿವರು, ಶಾಸಕರು ಮುಖಂಡರು ಭಾಗವಹಿಸುವ ಸಾಧ್ಯತೆಗಳಿವೆ.
ಈ ಹಿಂದೆ ದಲಿತ ನಾಯಕರು ಸಭೆ ನಡೆಸಲು ತೀರ್ಮಾನಿಸಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್ ತಡೆಯೊಡ್ಡಿದ್ದರು ಎನ್ನಲಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಸೂಚನೆಯ ಬೆನ್ನಲ್ಲೇ ಸಭೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ದಲಿತ ನಾಯಕರು ಸಭೆ ನಡೆಸುವ ಮೂಲಕ ತಮ್ಮ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.