ರಾಜಕೀಯ ಸುದ್ದಿ

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 2000 ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

Share It

ವಿಧಾನಸಭೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿ (ಬ್ಯಾಕ್‌ ಲಾಗ್ ಸೇರಿ) ನೇಮಕಾತಿ ಪ್ರಕ್ರಿಯೆಯಲ್ಲಿ ಈಗಾಗಲೇ 1000 ಹುದ್ದೆಗಳನ್ನು ಭರ್ತಿ ಮಾಡಿದ್ದು, ಇನ್ನೂ 2000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಶೋತ್ತರ ಕಲಾಪದಲ್ಲಿ ಸೋಮವಾರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2019 ರಲ್ಲಿ 2,555 ಮತ್ತು 259 ಚಾಲಕ ಕಂ. ನಿರ್ವಾಹಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಆ ಅಧಿಸೂಚನೆಯನ್ನು ತಡೆಹಿಡಿಯಲಾಗಿತ್ತು. ತರುವಾಯ 2024ರಲ್ಲಿ ಹುದ್ದೆಗಳ ಸಂಖ್ಯೆಯನ್ನು ಚಾಲಕ ಕಂ. ನಿರ್ವಾಹಕ 1000, ಚಾಲಕ ಕಂ. ನಿರ್ವಾಹಕ ಬ್ಯಾಕ್‌ಲಾಗ್ 259 ಮತ್ತು ಚಾಲಕ (ಬ್ಯಾಕ್‌ಲಾಗ್ ಸೇರಿ) 741 ಒಟ್ಟು 2000 ಹುದ್ದೆಗಳಿಗೆ ಮಾರ್ಪಡಿಸಲಾಗಿತ್ತು ಎಂದರು.

ನೇಮಕಾತಿ ಪ್ರಕ್ರಿಯೆ ನಡೆಸಿ, ಇದುವರೆಗೆ ಚಾಲಕ ಕಂ. ನಿರ್ವಾಹಕ ಬ್ಯಾಕ್‌ಲಾಗ್ 259 ಮತ್ತು ಚಾಲಕ (ಬ್ಯಾಕ್‌ಲಾಗ್ ಸೇರಿ) 741 ಒಟ್ಟು 1000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

ಉಳಿದಂತೆ ಬಾಕಿ ಇರುವ 1000 ಚಾಲಕ ಕಂ. ನಿರ್ವಾಹಕ ಹುದ್ದೆಗಳ ಬದಲಿಗೆ 1000 ನಿರ್ವಾಹಕ ಹುದ್ದೆಗಳನ್ನು ಭರ್ತಿಗೊಳಿಸಲು ಅನುಮತಿಗೆ ಕೋರಲಾಗಿದೆ. ಅಲ್ಲದೇ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡುವ ದೃಷ್ಟಿಯಿಂದ 1000 ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಂದ ಆ.2ರಂದು ಪ್ರಸ್ತಾವನೆ ಬಂದಿದೆ ಎಂದು ಸಚಿವರು ವಿವರಿಸಿದರು.

ಪ್ರಸ್ತಾವನೆಗೆ ಆರ್ಥಿಕ ಇಲಾಖೆ, ಕಾನೂನು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳ ಅಭಿಪ್ರಾಯ ಪಡೆದು, ಪರಿಶೀಲಿಸಿ ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.


Share It

You cannot copy content of this page