ಅಂಕಣ ರಾಜಕೀಯ

ರಾಜ್ಯದಲ್ಲಿ ವಿಪಕ್ಷವಾಗಿಯೂ ವಿಫಲವಾದ ಬಿಜೆಪಿ !

Share It

ವೆಂಕಟೇಶ ಆರ್.ದಾಸ್,

ಆಡಳಿತ ಪಕ್ಷವಾಗಿ ಸಂಪೂರ್ಣ ವಿಫಲವಾಗಿ ಕಳೆದ ಚುನಾವಣೆಯಲ್ಲಿ ಮಕಾಡೆ ಮಲಗಿದ ಭಾರತೀಯ ಜನತಾ ಪಕ್ಷ ಕಳೆದ ಎರಡು ವರ್ಷದಿಂದ ವಿಪಕ್ಷವಾಗಿಯೂ ವಿಫಲವಾಗಿದೆ. ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ದ ಸೂಕ್ತ ರೀತಿಯಲ್ಲಿ ಹೋರಾಟ ಸಂಘಟಿಸುವಲ್ಲಿ ಸೋತಿರುವ ಬಿಜೆಪಿ ನಾಯಕರು ತಮ್ಮೊಳಗಿನ ಬಿರುಕಿನಿಂದ, ಪಕ್ಷದೊಳಗಿನ ಆಂತರಿಕ ವೈಫಲ್ಯದಿಂದ ಬರೀ ತಮ್ಮ ಹೈಕಮಾಂಡ್ ಹೇಳಿದ ಮತ್ತು ಹಳಸಲು ಸೈದ್ಧಾಂತಿಕ ಹೋರಾಟದಿಂದ ಒಂದು ಕ್ರಿಯಾಶೀಲ ಪ್ರತಿಪಕ್ಷವಾಗುವ ಅವಕಾಶವನ್ನೂ ಕಳೆದುಕೊಂಡಿದೆ.

ಬಿಜೆಪಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಹೋರಾಟ ಮಾಡಲು ಮುಂದಾಗುವ ಮನಸ್ಥಿತಿ ಕಾಂಗ್ರೆಸ್ ನಾಯಕರಿಗೆ ವಿರೋಧವಿಲ್ಲದ ಆಡಳಿತ ನಡೆಸಲು ಅನುವು ಮಾಡಿಕೊಟ್ಟಿದೆ. ಅದೇ ಮನಸ್ಥಿತಿ ವಿಧಾನಸಭೆ ಕಲಾಪದಲ್ಲಿಯೂ ನಡೆಯುತ್ತಿದ್ದು, ಕಲಾಪದಲ್ಲಿ ರಚನಾತ್ಮಕ ಚರ್ಚೆಗಳ ಮೂಲಕ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಇಗೆ ಸಿಲುಕಿಸುವಲ್ಲಿ ಬಿಜೆಪಿ ನಾಯಕರು ವಿಳವಾಗುತ್ತಿದ್ದಾರೆ. ಸದನದಲ್ಲಿ ಯಾವುದೇ ಅಭಿವೃದ್ಧಿ ಕುರಿತು ಚರ್ಚೆಗಳು ಈವರೆಗೆ ನಡೆಯದೆ ಬರೀ ಧರ್ಮಸ್ಥಳದ ತನಿಖೆ ವಿಚಾರದಲ್ಲಿ ಬಿಜೆಪಿ ನಾಯಕರು ಮುಳುಗೇಳುತ್ತಿರುವುದು ರಾಜ್ಯದ ಜನತೆಯ ಅಸಹನೆಗೆ ಕಾರಣವಾಗುತ್ತಿದೆ.

ಧರ್ಮಸ್ಥಳದ ಲ್ಲಿ ನಡೆದಿವೆ ಎನ್ನಲಾದ ಸರಣಿ ಹತ್ಯೆಗಳ ಕುರಿತು ಸರಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಎಸ್ಐಟಿ ರಚನೆ ಮಾಡಿ, ಎಸ್ಐಟಿ ತನಿಖೆ ನಡೆಯುತ್ತಿದೆ. ಈ ತನಿಖೆಯ ಹಂತದಲ್ಲಿ ಬಿಜೆಪಿ ನಾಯಕರು ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಅಪಚಾರವಾಗುತ್ತಿದೆ ಎಂಬ ವಿಷಯ ಮುಂದಿಟ್ಟುಕೊಂಡು ಸದನದ ಹೊರಗೆ ಮತ್ತು ಒಳಗೆ ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಸಹಜವಾಗಿಯೇ ಆಡಳಿತ ಪಕ್ಷ ಮತ್ತು ಸಾರ್ವಜನಿಕರ ಅಸಹನೆಗೂ ಕಾರಣವಾಗಿದೆ. ತನಿಖೆಯನ್ನು ಸ್ವತಃ ಧರ್ಮಸ್ಥಳದ ಆಡಳಿತವೇ ಸ್ವಾಗತಿಸಿದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ ಎಂಬುದು ಎಲ್ಲರ ಆಶಯವಾಗಿದ್ದರೂ, ಅದನ್ನು ಧಾರ್ಮಿಕ ಭಾವನೆಯಾಗಿ ಬದಲಾಯಿಸುವ ಪ್ರಯತ್ನ ನಡೆಸಿದ ಬಿಜೆಪಿ ನಗೆಪಾಟಿಲಿಗೀಡಾಗಿದೆ.

ರಾಜ್ಯ ಸರಕಾರ ಧರ್ಮಸ್ಥಳದ ವಿಚಾರದಲ್ಲಿ ಏನೇ ತೀರ್ಮಾನ ತೆಗೆದುಕೊಂಡಿದ್ದರೂ, ತನಿಖೆಯನ್ನು ನಡೆಸುವಲ್ಲಿ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಇದೊಂದು ಷಡ್ಯಂತ್ರ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದರೂ, ತನಿಖೆಯ ಕುರಿತು ಮಾಹಿತಿ ನೀಡಬೇಕಿದ್ದ ಅಧಿಕೃತ ಮಂತ್ರಿ ಗೃಹಸಚಿವ ಡಾ. ಜಿ. ಪರಮೇಶ್ವರ ಅವರು, ತನಿಖೆ ಯಾವುದೇ ಕಾರಣಕ್ಕೂ ಹಾದಿ ತಪ್ಪುವುದಿಲ್ಲ. ತನಿಖೆಯ ವಿಚಾರದಲ್ಲಿ ಯಾವುದೆ ಬಾಹ್ಯ ಪ್ರಭಾವಕ್ಕೆ ಒಳಗಾಗುವುದಿಲ್ಲ ಎನ್ನುವ ಮೂಲಕ ಸರಕಾರದ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಬಿಟ್ಟಿದ್ದಾರೆ.

ಈ ನಡುವೆ ಧರ್ಮಸ್ಥಳ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರ ನಡೆಯೂ ಟೀಕೆಗೆ ಗುರಿಯಾಗಿದೆ. ಧರ್ಮಸ್ಥಳದ ವಿರುದ್ಧ ಯಾರೂ ಈವರೆಗೆ ಆರೋಪ ಮಾಡುತ್ತಿಲ್ಲ. ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಕೊಲೆಗಳ ಬಗ್ಗೆ ಬಹಳ ದಿನಗಳಿಂದ ಹೋರಾಟ ನಡೆಯುತ್ತಿದೆ. ಇದರಲ್ಲಿ ಸತ್ಯಾಂಶ ಹೊರಬರಲಿ ಎಂಬುದು ಹೋರಾಟಗಾರರ ಆಗ್ರಹ. ಈ ನಡುವೆ ಧರ್ಮಸ್ಥಳದ ವಿಚಾರದಲ್ಲಿ ಕೆಲ ಯೂಟ್ಯೂಬ್ ಪತ್ರಕರ್ತರನ್ನು ಬಿಟ್ಟರೆ ಮತ್ಯಾರೂ ಧರ್ಮಾಧಿಕಾರಿಗಳ ವಿರುದ್ಧವಾಗಲೀ, ಅವರ ಕುಟುಂಬದ ವಿರುದ್ಧವಾಗಲೀ ನೇರ ಆರೋಪ ಮಾಡಿಲ್ಲ. ಪೊಲೀಸರು ತನಿಖೆಯನ್ನು ಕೂಡ ನಡೆಸಿಲ್ಲ. ಹೀಗಾಗಿರುವಾಗ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವಾಯಿತು ಎಂಬ ಬಿಜೆಪಿಯ ವಾದವನ್ನು ಜನರು ಒಪ್ಪುತ್ತಿಲ್ಲ.

ಒಂದು ವೇಳೆ ಧಾರ್ಮಿಕ ಕ್ಷೇತ್ರವೊಂದರಲ್ಲಿ ಇಂತಹ ನೂರಾರು ಕೊಲೆಗಳು ನಡೆದಿವೆ ಎಂಬುದಾದರೆ, ಅದು ಯಾವುದೇ ಧರ್ಮದ ಶ್ರದ್ಧಾಕೇಂದ್ರವಾಗಲೀ, ಅಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವುದು ಸರಕಾರದ ಕರ್ತವ್ಯ. ಆದರೆ, ರಚನಾತ್ಮಕ ವಿಪಕ್ಷವಾಗಿ ಇಂತಹದಕ್ಕೆ ಬೆಂಬಲ ನೀಡಬೇಕಿದ್ದ ಬಿಜೆಪಿ, ತನ್ನ ಅದೇ ಹಳಸಲು ಹಿಂದೂ ಅಜೆಂಡಾಗೆ ಅಂಟಿಕೊಂಡು ಹೋರಾಟ ನಡೆಸಲು ಹೋಗಿ ಬೆತ್ತಲಾಗಿದೆ.

ಇನ್ನು ಧರ್ಮಸ್ಥಳ ಕೊಲೆ ಪ್ರಕರಣಗಳ ವಿರುದ್ಧ ಹೋರಾಟ ನಡೆಸುತ್ತಿರುವವರ ಬಗ್ಗೆ ಹಗುರವಾಗಿ ಮಾತನಾಡಿದ ಬಿಜೆಪಿ ನಾಯಕರು ತಮ್ಮದೇ ಪಕ್ಷಕ್ಕೆ ಮುಜುಗರ ತರಿಸುವಂತಹ ಪರಿಸ್ಥಿತಿಯನ್ನು ಸದನದಲ್ಲಿ ನಿರ್ಮಾಣ ಮಾಡಿದ್ದಾರೆ. ಮಹೇಶ್ ತಿಮ್ಮರೋಡಿ ಹೇಳಿಕೆ ಉಲ್ಲೇಖಿಸಿ ವೀರಾವೇಶದಲ್ಲಿ ಮಾತನಾಡಿದ್ದ ಆರ್. ಅಶೋಕ್, ತಮ್ಮದೇ ಪಕ್ಷದ ಶಾಸಕ ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಗೆ ಜೋತುಬಿದ್ದಿದ್ದರು. ಅದು ಸುತ್ತಿ ಬಳಸಿ ಇದೀಗ ಬಿಜೆಪಿಗೆ ಸುತ್ತಿಕೊಂಡಿದ್ದು, ಒಂದು ವೇಳೆ ಸರಕಾರ ಕ್ರಮಕ್ಕೆ ಮುಂದಾಗುವುದಾದರೆ, ಬಿಜೆಪಿ ಶಾಸಕರ ವಿರುದ್ಧ ಮೊದಲು ಕ್ರಮವಾಗಬೇಕಿದೆ.
ಅದೆ ರೀತಿ ಸರಕಾರದ ವಿರುದ್ಧ ಸದನದಲ್ಲಿ ಘರ್ಜಿಸಲು ಅನೇಕ ವಿಷಯಗಳಿದ್ದವು. ಅದೆಲ್ಲವನ್ನು ಬಿಟ್ಟು ಧರ್ಮದ ಹಿಂದೆ ಬಿದ್ದ ಬಿಜೆಪಿಗೆ ಮತ್ತೊಂದು ಹಿನ್ನಡೆಯಾಗಿದೆ. ಬೆಂಗಳೂರು ಮಹಾನಗರದಲ್ಲಿ ಬಿದ್ದಿರುವ ಗುಂಡಿಗಳ ವಿಚಾರದಲ್ಲಿ ಬಿಜೆಪಿ ಈವರೆಗೆ ಒಂದೇ ಒಂದು ಮಾತನಾಡಿಲ್ಲ. ರಸಗೊಬ್ಬರ ಸಮಸ್ಯೆಯನ್ನಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲಿಕಿಸುವ ಎಲ್ಲ ಸಾಧ್ಯತೆಗಳಿದ್ದರೂ, ಬಿಜೆಪಿಗೆ ಅದರ ಮೇಲೆ ಹೋರಾಟ ಮಾಡಲು ಸಾಧ್ಯವೇ ಆಗಲಿಲ್ಲ. ಕೊನೆಗೆ ಸಿಕ್ಕಿದ್ದ ಧರ್ಮಸ್ಥಳ ಕೊಲೆ ಪ್ರಕರಣಗಳಲ್ಲಿಯೂ ಬಿಜೆಪಿ ವಿಪಕ್ಷವಾಗಿ ಹೋರಾಟ ನಡೆಸಲು ವಿಫಲವಾಗಿದೆ.

ಹಿಂದೆ ಮೂಡಾ ಹಗರಣದ ಬೆನ್ನುಬಿದ್ದು ಬಿಜೆಪಿ ಹೊರಟಿತ್ತು. ಹೋರಾಟ ನಡೆಸಿದಾಗ ಬಿಜೆಪಿಯೇ ಮನೆಯೊಂದು ಮೂರು ಬಾಗಿಲಾಗಿತ್ತು. ಯತ್ನಾಳ್ ಮತ್ತು ರೆಬೆಲ್ ಶಾಸಕರ ದಂಡು ಮೂಡಾ ಹೋರಾಟವನ್ನು ಹಳ್ಳಹಿಡಿಸಿತ್ತು. ತನಿಖೆ ನಡೆದೂ ಮೂಡ ಹಗರಣದಲ್ಲಿ ಸಿಎಂ ಮತ್ತು ಅವರ ಪತ್ನಿಗೆ ರಿಲೀಫ್ ಸಿಕ್ಕಿತು. ಇದು ಸಹಜವಾಗಿಯೇ ಬಿಜೆಪಿಯ ತಳಬುಡವಿಲ್ಲದ ಆರೋಪಗಳಿಗೆ ಸಾಕ್ಷಿಯಾದ ಪ್ರಕರಣ ಎಂದು ಜನಮಾನಸದಲ್ಲಿ ಉಳಿದುಬಿಟ್ಟಿದೆ. ವಾಲ್ಮೀಕಿ ನಿಗಮದ ಅಕ್ರಮ, ಬೋವಿ ನಿಗಮದಲ್ಲಾದ ಹಗರಣಗಳನ್ನೆಲ್ಲ ವಿಪಕ್ಷವಾಗಿ ಮತ್ತಷ್ಟು ಗಟ್ಟಿಯಾಗಿ ವಿರೋಧಿಸಿ ಸರಕಾರವನ್ನಿ ಇಕ್ಕಟ್ಟಿಗೆ ಸಿಲುಕಿಸಬಹುದಾದ ಎಲ್ಲ ಅವಕಾಶಗಳಿದ್ದರೂ, ಅದನ್ನು ಕಳೆದುಕೊಂಡು ಬಿಜೆಪಿ ನಾಯಕರು ನಿಂತಿದ್ದಾರೆ.

ಈಗಾಗಲೇ ಸದನದ ಮುಕ್ಕಾಲು ಪಾಲು ಮುಗಿದಿದ್ದು, ಈವರೆಗೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಒಂದೇ ಒಂದು ಪ್ರಯತ್ನ ಬಿಜೆಪಿ ಮಾಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಅವರು ಈವರೆಗೆ ಒಂದೇ ಒಂದು ಪ್ರಶ್ನೆ ಮಾಡಿಲ್ಲ. ಧರ್ಮಸ್ಥಳ ಪ್ರಕರಣ, ಕೆಆರ್ ಎಸ್ ನಿರ್ಮಾಣದಲ್ಲಿ ಟಿಪ್ಪು ಪಾತ್ರದ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಗೆ ವಿರೋಧದಂತಹ ಪ್ರಯತ್ನದ ಹೊರತಾಗಿ ಬಿಜೆಪಿಯಿಂದ ರಚನಾತ್ಮಕ ಹೋರಾಟ ಕಂಡುಬಂದಿಲ್ಲ. ಬಹುಮುಖ್ಯವಾಗಿ ಆಗಬೇಕಿದ್ದ ಬಿಬಿಎಂಪಿ ಚುನಾವಣೆ, ಬಿಬಿಎಂಪಿ ವ್ಯಾಪ್ತಿಯ ರಸ್ತೆಗುಂಡಿಗಳು, ಮಳೆಹಾನಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ, ರಸಗೊಬ್ಬರ ದಾಸ್ತಾನು ಮೊದಲಾದ ವಿಚಾರಣಗಳಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಯಾಗಿ ದನಿಯೆತ್ತಬೇಕಿತ್ತು. ಆಳುವ ಸರಕಾರಕ್ಕೆ ಎಷ್ಟು ಜವಾಬ್ದಾರಿ ಇರುತ್ತದೆಯೊ ಅಷ್ಟೇ ಜವಾಬ್ದಾರಿ ಪ್ರತಿಪಕ್ಷಕ್ಕೂ ಇರುತ್ತದೆ. ಅದನ್ನು ಬಿಜೆಪಿ ಇನ್ನೂ ಮುಂದಾದರೂ ಮಾಡಬೇಕು ಎಂಬುದು ರಾಜ್ಯದ ಜನರ ಆಶಯ.


Share It

You cannot copy content of this page