ಕಲಬುರಗಿ
ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಹೆಸರು, ತೊಗರಿ ಹಾಗೂ ಸೋಯಾ ಬೆಳೆ ಹಾಳಾಗಿದ್ದು, ಕೂಡಲೇ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಬೊಬ್ಬೆ ಚಳವಳಿ ನಡೆಸಿದರು.
ನಗರದ ಸರ್ದಾರ್ ವಲ್ಲಭಭಾಯ ಪಟೇಲ್ ವೃತ್ತದಿಂದ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ರಸ್ತೆಯಲ್ಲಿ ಸಂಚಾರ ತಡೆ ನಡೆಸಿದರು. ಈ ವೇಳೆ ಹೋರಾಟಗಾರರು ಬೊಬ್ಬೆ ಹೊಡೆದುಕೊಳ್ಳುವ ಮೂಲಕ ‘ರೈತರು ಸಂಕಷ್ಠದಲ್ಲಿ ಇರುವುದು, ಸರಕಾರಕ್ಕೆ ಕಾಣುತ್ತಿಲ್ಲ ಹಾಗೂ ಕೇಳುತ್ತಿಲ್ಲ’ ಎಂದು ಬೊಬ್ಬೆ ಹೊಡೆದರು.
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಮಳೆಗೆ ಸಾಕಷ್ಟು ಬೆಳೆ ಹಾನಿಯಾಗಿದೆ. ಶೀಘ್ರ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ಕೊಡಿಸುವ ಕೆಲಸ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕು. ಅದಕ್ಕೂ ಮುನ್ನ ತಕ್ಷಣವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಾತು ಮಾತಿಗೆ ಬೆಳೆ ವಿಮೆ ಮಾಡಿಸಿ ಎಂದು ಹೇಳುತ್ತಾರೆ. ಆದರೆ, ಕಳೆದ ವರ್ಷದ ಬೆಳೆ ವಿಮೆ ಹಣ ಇನ್ನು ಬಂದಿಲ್ಲ. ಮೂರ್ನಾಲ್ಕು ವರ್ಷದಿಂದ ನಿರಂತರ ಪ್ರಕೃತಿ ವಿಕೋಪದಿಂದ ಎಲ್ಲ ಬೆಳೆಗಳು ಹಾಳಾಗುವ ಮೂಲಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಚಿವರು ಕನಿಷ್ಠ ಕಲ್ಯಾಣ ಕರ್ನಾಟಕ ಭಾಗದ ರೈತರ ಗೋಳು ಕೇಳಲು ಆಗಮಿಸುತ್ತಿಲ್ಲ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿಪತ್ರ ಸಲ್ಲಿಸಿದರು. ರಾಯಪ್ಪ ಹುರಮುಂಜಿ, ದಿಲೀಪ್ ನಾಗೂರೆ, ಎಂ.ಬಿ.ಸಜ್ಜನ್, ಅಲ್ತ್‌ಾ ಇನಾಂದಾರ, ಚಂದ್ರಪ್ಪ ಪೂಜಾರಿ, ರೇವಣಸಿದ್ದಪ್ಪ ಪಾಟೀಲ್, ಕಾಶಿನಾಥ ಬಂಡಿ, ಸಿದ್ದರಾಮ ಧಣ್ಣೂರು, ಅಶೋಕ ಹೂಗಾರ, ಹಣಮಂತ ತಳವಾರ, ಸಾಯಬಣ್ಣ ಕವಲಗಾ ಇತರರಿದ್ದರು.