ಶಿರಸಿ: ಎರಡು ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಾತ್ ಆಗಿ ಏರ್ ಗನ್ ಗುಂಡು ಹಾರಿ ಒಂಬತ್ತು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಟ್ಟ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ಸಮೀಪದ ಸೋಮನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡಲು ಬಸಪ್ಪ ಉಂಡಿಯರ್ ಕುಟುಂಬ ಕಳೆದ ಒಂದು ವರ್ಷದ ಹಿಂದೆ ರಾಘವೇಂದ್ರ ಹೆಗಡೆ ಅವರ ಮನೆಗೆ ಬಂದಿದೆ. ಈ ಕುಟುಂಬಕ್ಕೆ ಕರಿಯಪ್ಪ, ದಿಳಿಯಪ್ಪ ಹಾಗೂ ಪ್ರೀತಿ ಎಂಬ ಮೂರು ಮಕ್ಕಳಿದ್ದಾರೆ. ಇಂದು, ಶುಕ್ರವಾರ ಶಾಲೆಗೆ ರಜೆಯಿದ್ದ ಬಸಪ್ಪ ಉಂಡಿಯರ್ ಅವರ ಮಕ್ಕಳಾದ ಕರಿಯಪ್ಪ (9) ಮತ್ತು ಆತನ ತಮ್ಮ (7) ಹಾಗೂ ಮಗಳು ಆಟವಾಡುತ್ತಿದ್ದರು. ಅದೇ ಸಮಯದಲ್ಲಿ ಮಂಗಗಳಿಂದ ತೋಟ ಕಾಯಲು ಬಂದಿದ್ದ ನಿತೀಶ ಎಂಬುವರು ಎರ್ ಗನ್ ಹೆಗಲಿಗೆ ಹಾಕಿ ಗೇಟಿನಿ ಹತ್ತಿರ ಬಂದು ನಿಂತಿದ್ದರು.
ಅಲ್ಲೇ ಸಮೀಪದಲ್ಲಿ ಆಟವಾಡುತ್ತಿದ್ದ ಮಕ್ಕಳು ಏರ್‌ಗನ್ ನೋಡಿ ಅಲ್ಲಿಗೆ ಬಂದರು. ಈ ವೇಳೆ ಕಿರಿಯ ಸಹೋದರ ಆಕಸ್ಮಿಕವಾಗಿ ಏರ್ ಗನ್‌ನ ಟ್ರಿಗರ್ ಒತ್ತಿದಾಗ ಗುಂಡು ಹಾರಿ ಅಣ್ಣ ಗೇಟಿನ ಮುಂಭಾಗದಲ್ಲಿದ್ದ ಅಣ್ಣ ಕರಿಯಪ್ಪ (9) ಎಂಬಾತನ ಎದೆಗೆ ಆಕಸ್ಮಿಕವಾಗಿ ತಗುಲಿ ಕುಸಿದು ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿ ಗೀತಾ ಪಾಟೀಲ್ ಮತ್ತು ಸಿಪಿಐ ಶಶಿಕಾಂತ ವರ್ಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.