ಉಪಯುಕ್ತ ಸುದ್ದಿ

ಮಂಗಳೂರಲ್ಲಿ ರಾಜ್ಯದ ಮೊಟ್ಟ ಮೊದಲ ಬಗ್ಗಿ ಆ್ಯಂಬುಲೆನ್ಸ್ ಸೇವೆ

Share It

ಮಂಗಳೂರು: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಬಗ್ಗಿ ಆ್ಯಂಬುಲೆನ್ಸ್ ಸೇವೆ ಆರಂಭಗೊAಡಿದ್ದು, ಇದು ನೂತನ ಸರ್ಜಿಕಲ್ ಬ್ಲಾಕ್ ಆದ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳನ್ನು ವಾರ್ಡ್ಗೆ ಶಿಫ್ಟ್ ಮಾಡಲು ಸಹಕಾರಿಯಾಗಿದೆ.

ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನೋಂದಣಿ ವಿಭಾಗ, ಹೊರರೋಗಿ ವಿಭಾಗ, ವಾರ್ಡ್, ಸ್ಕ್ಯಾನಿಂಗ್, ಎಕ್ಸ್ರೇ ಇತ್ಯಾದಿ ವ್ಯವಸ್ಥೆಗಳು ವಿವಿಧ ಕಟ್ಟಡಗಳಲ್ಲಿದೆ. ಆದ್ದರಿಂದ ರೋಗಿಗಳನ್ನು ಅವಶ್ಯಕತೆ ಇರುವೆಡೆಗೆ ವೀಲ್ ಚೇರ್‌ಗಳಲ್ಲಿ ಆಸ್ಪತ್ರೆಯ ಹೊರಗಿನ ರಸ್ತೆಯಲ್ಲಿ ಕರೆದುಕೊಂಡು ಹೋಗಲು, ಶಿಫ್ಟ್ ಮಾಡಲು ಕಷ್ಟವಾಗುತ್ತಿತ್ತು. ಅಲ್ಲದೆ, ಆಸ್ಪತ್ರೆಯಲ್ಲಿ ಒಂದೇ ಆಂಬ್ಯುಲೆನ್ಸ್ ಇರುವ ಕಾರಣ ಕಾಯುವ ಸ್ಥಿತಿ ಎದುರಾಗುತ್ತಿತ್ತು.

ಇದೇ ಕಾರಣಕ್ಕೆ ಬಗ್ಗಿ ಆ್ಯಂಬುಲೆನ್ಸ್ ರೋಗಿಗಳಿಗೆ ಹೆಚ್ಚು ಸಹಾಯಕ್ಕೆ ಬರಲಿದೆ. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ೭ ಲಕ್ಷ ರೂ. ಅನುದಾನದಲ್ಲಿ ಈ ಬಗ್ಗಿ ಆ್ಯಂಬುಲೆನ್ಸ್ನ್ನು ಕೊಡುಗೆಯಾಗಿ ನೀಡಲಾಗಿದೆ. ಚಿಕಿತ್ಸೆ ಪಡೆಯಲು ಆಗಮಿಸುವ ರೋಗಿಗಳು, ಅಸೌಖ್ಯವಿರುವವರು ಹಾಗೂ ವೃದ್ಧರು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಸುಲಭವಾಗಿ ತೆರಳಲು ಈ ಬಗ್ಗಿ ಇದು ಅನುಕೂಲವಾಗಲಿದೆ.

ಈ ರೀತಿಯ ಬಗ್ಗಿ ಆ್ಯಂಬುಲೆನ್ಸ್ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲನೆಯದು. ಈ ಆಸ್ಪತ್ರೆಗೆ ಮೆಡಿಸಿನ್ ಸ್ಥಳಾಂತರ ಮಾಡಲು, ಆಹಾರ ವಿತರಣೆ ಮಾಡಲು ಬಗ್ಗಿ ವಾಹನ ಅಗತ್ಯವಿದ್ದು, ಇದರ ಬಗ್ಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಆಸ್ಪತ್ರೆ ಇದೆ.
ಗಂಟೆಗೆ ಸುಮಾರು ೨೫ ಕಿ.ಮೀ ವೇಗ: ಲಿಥಿಯನ್ ಈಯೋನ್ ಬ್ಯಾಟರಿ ಮಾದರಿಯ ಸ್ಟೀಲ್ ಸ್ಟ್ರೆಚರ್ ಸಹಿತ ಎಲೆಕ್ಟ್ರಿಕ್ ಆಂಬ್ಯುಲೆನ್ಸ್ ಈ ಬಗ್ಗಿಯಲ್ಲಿದೆ.

ರೋಗಿಯೊಬ್ಬ ಮಲಗಿ ಸಂಚರಿಸಲು, ಚಾಲಕ ಮತ್ತು ರೋಗಿಯ ಕಡೆಯವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ೪೦೦ರಿಂದ ೫೦೦ ಕೆ.ಜಿ. ಭಾರ ಹೊರುವ ಸಾಮರ್ಥ್ಯ ಇದಕ್ಕಿದೆ. ವಿದ್ಯುತ್ ಚಾಲಿತ ಈ ಬಗ್ಗಿ ಆಂಬ್ಯುಲೆನ್ಸ್ ಒಂದು ಬಾರಿ ಸಂಪೂರ್ಣ ಚಾರ್ಜ್ ಆದಲ್ಲಿ, ೪೫-೫೦ ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸುಮಾರು ೨೫ ಕಿ.ಮೀ. ವೇಗ ಹೊಂದಿದೆ.


Share It

You cannot copy content of this page