ರಾಜಕೀಯ ಸುದ್ದಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಬದಲು ಜೈಶಂಕರ್ ಮಾತು

Share It

ನವದೆಹಲಿ: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಚರ್ಚೆಯಲ್ಲಿ ಮೋದಿ ಮಾತನಾಡುವ ಬದಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಲಿದ್ದಾರೆ.

ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಾಮಾನ್ಯ ಚರ್ಚೆಗೆ ಭಾಷಣಕಾರರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯನ್ನು ವಿಶ್ವಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತವನ್ನು ಪ್ರತಿನಿಧಿಸಿ, ಎಸ್.ಜೈಶಂಕರ್ ಸೆಪ್ಟೆಂಬರ್ 27 ರಂದು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನವು ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿದೆ. ಉನ್ನತ ಮಟ್ಟದ ಸಾಮಾನ್ಯ ಚರ್ಚೆಯು ಸೆಪ್ಟೆಂಬರ್ 23ರಿಂದ 29 ರವರೆಗೆ ನಡೆಯಲಿದೆ. ಅಧಿವೇಶನದ ಸಾಂಪ್ರದಾಯಿಕ ಮೊದಲ ಭಾಷಣಕಾರರಾಗಿ ಬ್ರೆಜಿಲ್ ನಾಯಕರು ಭಾಗವಹಿಸಲಿದ್ದು, ನಂತರ ಅಮೆರಿಕ ಭಾಗವಹಿಸಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 23 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಟ್ರಂಪ್ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

ಸೆಪ್ಟೆಂಬರ್ 26 ರಂದು ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರು ಸೆಪ್ಟೆಂಬರ್ 29 ರಂದು ಮಾತನಾಡಲಿದ್ದಾರೆ.

ಯುಎನ್‌ಜಿಎ ಸಾಮಾನ್ಯ ಚರ್ಚೆಗೆ ಭಾಷಣಕಾರರ ಪಟ್ಟಿ ತಾತ್ಕಾಲಿಕವಾಗಿದ್ದು, ಉನ್ನತಮಟ್ಟದ ಚರ್ಚೆ ಸಭೆ ಆರಂಭಕ್ಕೆ ಒಂದು ವಾರದ ಮುಂದೆ ವೇಳಾಪಟ್ಟಿ ಮತ್ತು ಭಾಷಣಕಾರರಲ್ಲಿ ಬದಲಾವಣೆಗಳ ಸಾಧ್ಯತೆ ಯಾವಾಗಲೂ ಇರುತ್ತದೆ. ಅದಕ್ಕೆ ಅನುಗುಣವಾಗಿ ಆ ವೇಳೆಯಲ್ಲಿ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನವು ಜಗತ್ತಿನಾದ್ಯಂತ ಲಿಂಗ ಸಮಾನತೆ ಮುನ್ನಡೆಸುವಲ್ಲಿನ ಸಾಧನೆಗಳು, ಕೈಗೊಂಡ ಕ್ರಮಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಮೇಲೆ ಗಮನ ಹರಿಸಲಿದೆ.


Share It

You cannot copy content of this page