ಬೆಂಗಳೂರು: ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ವಸುದೇಂದ್ರ ಅವರ ತೇಜೋ ತುಂಗಭದ್ರಾ ಕಾದಂಬರಿ ಅನೇಕ ಆಯಾಮಗಳನ್ನು ಹೊಂದಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ಮಹತ್ವ ಪಡೆದಿದೆ ಎಂದು ಡಾ. ನಾ ಸೋಮೇಶ್ವರ ಹೇಳಿದರು.
ಅವರು ಇಂದು ದೊಡ್ಡಬಳ್ಳಾಪುರದ ದೇವರಾಜ ಅರಸು ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಯ ಮಾಲಿಕೆಯಡಿ ಮಾತನಾಡುತ್ತಿದ್ದರು.
ಮೂರು ವರ್ಷಗಳ ಸತತ ಅಧ್ಯಯನ, ಒಂದು ವರ್ಷದ ಬರವಣಿಗೆ ಹೀಗೆ ಅಪಾರ ಪರಿಶ್ರಮದ ಮೂಲಕ ಈ ಕಾದಂಬರಿಯ ರೂಪುಗೊಂಡಿದೆ. ಇದರಲ್ಲಿ ಚರಿತ್ರೆ, ಪ್ರೀತಿ ,ಕ್ರೌರ್ಯ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕತೆಯ ಒಳನೋಟ ಹೀಗೆ ಅನೇಕ ಮುಖಗಳನ್ನು ತಮ್ಮ ಪಾತ್ರಗಳ ಮೂಲಕ ವಸುಧೇಂದ್ರ ಅವರು ಅನಾವರಣ ಮಾಡುತ್ತಾ ಹೋಗಿದ್ದಾರೆ.
ಮೂರು ದೇಶಗಳು, ನಲವತ್ತಕ್ಕೂ ಅಧಿಕ ಪಾತ್ರಗಳು, ಎರಡು ನದಿಗಳ ದಡದಲ್ಲಿ ನಡೆಯುವ ಘಟನೆಗಳು ಈ ಕಾದಂಬರಿಯನ್ನು ರೋಚಕವಾಗಿ ಕಟ್ಟಿಕೊಟ್ಟಿವೆ.
ಅತ್ಯಂತ ಜನಪ್ರೀತಿ ಪಡೆದ ಈ ಕಾದಂಬರಿ 20 ಮುದ್ರಣ ಕಂಡಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ದೊಡ್ಡ ದಾಖಲೆಯೇ ಸರಿ. ವಸುದೇಂದ್ರ ಅವರ ಅಪರೂಪದ ನಿರೂಪಣಾ ಶೈಲಿ ಹಾಗೂ ಈ ಕಾದಂಬರಿಯ ಅಂತಃಸತ್ವ ಅದಕ್ಕೆ ಮೂಲ ಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಚಾರಿತ್ರಿಕ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಸಾಮಾಜಿಕ ಆಚರಣೆಯ ಅನೇಕ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಕನ್ನಡದ ಓದುಗರು ಈ ಕಾದಂಬರಿಯ ಮೂಲಕ ಹೊಸ ಅನುಭವ ಪಡೆದುಕೊಂಡಿದ್ದಾರೆ. ಇದು ಎಲ್ಲ ಭಾರತೀಯ ಭಾಷೆಗಳಿಗೆ ಅನುವಾದವಾಗಲಿ ಎಂದು ನಾ .ಸೋಮೇಶ್ವರ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾದಂಬರಿಕಾರ ವಸುಧೇಂದ್ರ ಅವರು ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಇಂತಹ ಯೋಜನೆ ರೂಪಿಸಿರುವುದು ಅಭಿನಂದನೀಯ, ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆ ಇಲ್ಲ ಎಂದು ಬಹಳ ಜನ ನಂಬಿದ್ದಾರೆ ಆದರೆ ಕನ್ನಡ ಸಾಹಿತ್ಯ ಕೃತಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಮಾರುಕಟ್ಟೆಯೂ ಇದೆ .ಓದುಗರಿಗೆ ಬೇಕಾದುದ್ದನ್ನು ಕೊಡಬೇಕು ಅಷ್ಟೇ ಎಂದು ಹೇಳಿದರು.
ತಮ್ಮ ತೇಜೋ ತುಂಗಭದ್ರಾ ಕಾದಂಬರಿ ಇಂಗ್ಲಿಷ್ ಭಾಷೆಗೆ, ಹಿಂದಿ ಭಾಷೆಗೆ ಹಾಗೂ ತೆಲುಗು ಭಾಷೆಯಲ್ಲಿ ಪ್ರಕಟಗೊಂಡು, ಜೊತೆ ಜೊತೆಗೆ ಇತರ ಭಾರತೀಯ ಭಾಷೆಗಳಲ್ಲಿಯೂ ಅನುವಾದಿಸಲು ಅನುಮತಿ ಕೋರಿದ್ದಾರೆ ಅವರು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ, ತೇಜೋ ತುಂಗಭದ್ರಾ ಅನೇಕ ಕಾರಣಗಳಿಗಾಗಿ ಕನ್ನಡ ಸಾಹಿತ್ಯದಲ್ಲಿ ಬಹು ಮುಖ್ಯ ಸಾಹಿತ್ಯ ಕೃತಿಯಾಗಿ ನಿಲ್ಲುತ್ತದೆ ಎಂದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಯುವ ಜನರು ಸಹ ತಮ್ಮ ಓದಿನ ಅಭಿರುಚಿಯನ್ನು ಹಿಗ್ಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಜೆ ರಾಜೇಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ಗೌರಪ್ಪ ಎಂ ಎಸ್, ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಹಾಜರಿದ್ದರು.