ರಾಜಕೀಯ ಸುದ್ದಿ

ಮುಂದಿನ 10 ವರ್ಷ ಬಿಜೆಪಿಗೆ ಪ್ರತಿಪಕ್ಷ ಸ್ಥಾನವೇ ಗಟ್ಟಿ: ಸಚಿವ ರಾಮಲಿಂಗಾ ರೆಡ್ಡಿ ಟೀಕೆ ಭವಿಷ್ಯ

Share It

ಕೋಮುಗಲಭೆಯ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ

ಬೆಂಗಳೂರು: ಬಿಜೆಪಿಗೆ ನಾಯಕತ್ವ ಇಲ್ಲ. ಅವರು ಮುಂದಿನ 10 ವರ್ಷ ಪ್ರತಿಪಕ್ಷದಲ್ಲೇ ಕೂರುತ್ತಾರೆ. ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬೆಂಕಿ ಹೊತ್ತಿಸುವ ಕೆಲಸಕ್ಕೆ ಬೆಂಬಲ ಸಿಗುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋಮುಗಲಭೆ ತಡೆಯುವುದು ಸರಕಾರದ ಜತೆಗೆ ಎಲ್ಲ ಪಕ್ಷಗಳ ಜವಾಬ್ದಾರಿ. ಆದರೆ, ಬಿಜೆಪಿ ಬೆಂಕಿ ಹೊತ್ತಿಸುವ ಕೆಲಸ ಮಾಡುತ್ತಿದೆ. ಮದ್ದೂರು ಪ್ರಕರಣದಲ್ಲಿ ಕಲ್ಲು ಹೊಡೆದವರ ಮೇಲೆ ಕೇಸ್ ದಾಖಲಾಗಿದೆ. ಸರ್ಕಾರ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತದೆ. ಇಂತಹ ಘಟನೆ ನಡೆದಾಗ ಎಲ್ಲಾ ಪಕ್ಷದ ಮುಖಂಡರು ಕೂತು ಬಗೆಹರಿಸಬೇಕು. ಆದರೆ, ಬಿಜೆಪಿ ಬೆಂಕಿಗೆ ತುಪ್ಪ ಸುರಿದು, ಅರಾಜಕತೆ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬಾರದು ಎಂದು ಪ್ರತಿಭಟನೆ ಮಾಡುವುದರಿಂದಲೇ ಇದು ಸೃಷ್ಟಿಯಾಗಿದೆ. ಹಿಂದೆ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ಉದ್ಘಾಟನೆ ಮಾಡಿದ್ದರು‌. ಆಗಲೂ, ಅದನ್ನು ತಡೆಯಲು ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಪ್ರಯತ್ನ ಮಾಡಿದ್ದರು. ಇವಾಗ್ಲೂ ಬಿಜೆಪಿಯವರು ಗಲಾಟೆ ಸೃಷ್ಟಿ ಮಾಡ್ತಿದ್ದಾರೆ. ಬಿಜೆಪಿ ನಾಯಕರು ಬೆಂಕಿ ಹಚ್ಚೋದನ್ನು ಬಿಡಬೇಕು. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ತಿಳಿಸಿದರು.

ಧರ್ಮಸ್ಥಳದ ಮಂಜುನಾಥನ ಮೇಲೆ ಏನು ಆರೋಪ ಇಲ್ಲ. ಅಲ್ಲಿನ‌ ತನಿಖೆಗೂ ಮಂಜುನಾಥನಿಗೂ ಯಾವುದೇ ಸಂಬಂಧ ಇಲ್ಲ. ಬೇರೆಯವರ ಮೇಲೆ ಆರೋಪ ಇರುವ ಕಾರಣ ತನಿಖೆ ನಡೆಯುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ಧರ್ಮಸ್ಥಳ ಚಲೋ ಮಾಡಿಬಿಟ್ಟರು. ಧರ್ಮದ ಆಧಾರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಿ, ವಿಫಲವಾದರು. ಹೀಗಾಗಿ, ಹೊಸ ರಾಗ ತೆಗೆದಿದ್ದಾರೆ ಎಂದರು.

ಪರಿಷತ್ ಸದಸ್ಯ ಸಿಟಿ ರವಿ ದ್ವೇಷದ ಮಾತು ಸರಿನಾ? ಆ ರೀತಿಯ ಪ್ರಚೋದನೆ ಭಾಷಣದಿಂದಲೇ ಪೊಲೀಸರು ಎಫ್ಐರ್ ಹಾಕಿದ್ದಾರೆ. ಆರ್. ಅಶೋಕ್ ರವರು ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದಿದ್ದಾರೆ. ಪ್ರಧಾನಿ ಮೋದಿಯವರೇ ಆಮಂತ್ರಣ ಕೊಡೋಕೆ ಪಾಕಿಸ್ತಾನಕ್ಕೆ ಹೋಗಿದ್ದರು. ಪಾಕಿಸ್ತಾನದ ಮೇಲೆ ರಾತ್ರೋರಾತ್ರಿ ಯುದ್ದ ವಿರಾಮದ ಘೋಷಣೆ ಮಾಡಿದ್ದರು. ಇದೆಲ್ಲ ಪ್ರಶ್ನೆ ಮಾಡೋ ತಾಕತ್ತು ಬಿಜೆಪಿಗರಿಗೆ ಇದೆಯಾ ಎಂದು ಪ್ರಶ್ನಿಸಿದರು.


Share It

You cannot copy content of this page