ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ಕಲಾವಿದರಾದ ದಿ. ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾದೇವಿಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಮೇರು ಕಲಾವಿದರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೋಘ ಸೇವೆಯನ್ನು ಗುರುತಿಸಿ ಈ ಇಬ್ಬರು ಕಲಾವಿದರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇತ್ತೀಚೆಗೆ ನಟ ಹಾಗೂ ಅಳಿಯ ಅನಿರುಧ್, ಪತ್ನಿ ಭಾರತಿ, ಮಾಳವಿಕಾ, ಜಯಮಲಾ, ಶ್ರುತಿ ಸೇರಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು.
ಪ್ರಶಸ್ತಿ ಸಮಾರಂಭದ ದಿನಾಂಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ತೀರ್ಮಾನಿಸಲಿದ್ದಾರೆ ಎಂದು ಸಚಿವ eಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಕುವೆಂಪುಗೆ ಭಾರತ ರತ್ನ ನೀಡಲು ಶಿಫಾರಸು: ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ eಚ್.ಕೆ.ಪಾಟೀಲ್ ತಿಳಿಸಿದರು. ಜ್ಞಾನಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪುಗೆ ಭಾರತ ರತ್ನ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ರಾಜ್ಯ ಸರ್ಕಾರ ಕುವೆಂಪುಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.