ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಘೋಷಿಸಲಾಗಿದ್ದ ಶೇ.೫೦ ರಿಯಾಯಿತಿ ಅವಧಿ ಮುಗಿದಿದ್ದು, ಬೆಂಗಳೂರಲ್ಲಿ ಬರೋಬ್ಬರಿ 106 ಕೋಟಿ ರೂ ದಂಡ ಸಂಗ್ರಹವಾಗಿದೆ.
ಸೆಪ್ಟೆಂಬರ್ 12ರ ದಿನದಾಂತ್ಯಕ್ಕೆ ಎಲ್ಲಾ ವಿಧಾನಗಳ ಮೂಲಕ ಒಟ್ಟು 37,83,173 ಪ್ರಕರಣಗಳು ಇತ್ಯರ್ಥವಾಗಿದ್ದು, 106,00,19,550 ರೂ ದಂಡ ಸಂಗ್ರಹಣೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.
ಇ-ಚಲನ್‌ನ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಶೇ.50 ರಿಯಾಯಿತಿಯನ್ನ ರಾಜ್ಯ ಸರ್ಕಾರ ಘೋಷಿಸಿತ್ತು. ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೊಂದಣಿ ಸಂಖ್ಯೆಯನ್ನ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.
ಅಲ್ಲದೆ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನ ನೀಡುವ ಮೂಲಕವೂ ಸಹ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಎಲ್ಲ ವಿಧಾನಗಳ ಮೂಲಕ ಒಟ್ಟು ೧೦೬ ಕೋಟಿ ರೂ ದಂಡವನ್ನು ವಾಹನ ಸವಾರರು ಪಾವತಿಸಿದ್ದಾರೆ.
2023 ರ ಫೆಬ್ರವರಿ 11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ 50 ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಆಗಸ್ಟ್ ೨೩ ರಿಂದ ಸೆಪ್ಟೆಂಬರ್ 12 ರವರೆಗೆ, ಒಟ್ಟು 21 ದಿನಗಳ ರಾಜ್ಯ ಸರ್ಕಾರ ಅವಕಾಶ ನೀಡಿತ್ತು.
ಅಂತೆಯೇ ಆ.23 ರಂದು ಮೊದಲ ದಿನವೇ 1,48,೭747 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 4,18,20,500 ರೂ. ದಂಡ ಪಾವತಿ ಆಗಿತ್ತು. ಕೇವಲ ಒಂದು ವಾರದಲ್ಲಿ 28 ಕೋಟಿ ರೂ. ದಂಡ ಪಾವತಿಯಾಗಿತ್ತು. ಆಗಸ್ಟ್ 30 ಅಂತ್ಯಕ್ಕೆ ಒಟ್ಟು 8,52,201 ಪ್ರಕರಣಗಳು ಇತ್ಯರ್ಥವಾಗಿದ್ದು, 28,00,09,850 ರೂ. ದಂಡ ಸಂಗ್ರಹಣೆಯಾಗಿತ್ತು.