ಬೆಳಗಾವಿ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗುವ ಉದ್ದೇಶ ಹೊಂದಿ ಆಕೆಯ ಅಂಗಾಂಗ ಮುಟ್ಟಿದ ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ₹ 5,000 ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಕಿತ್ತೂರು ತಾಲೂಕು ತಿಗಡೊಳ್ಳಿ ಗ್ರಾಮದ ಮಹೇಶ ರಾಮಪ್ಪ ದೇಸಾಯಿ (35) ಶಿಕ್ಷೆಗೊಳಗಾದ ಆರೋಪಿ.
ಘಟನೆ ವಿವರ : 2022 ರ ಜ. 19 ರಂದು ಅಪ್ರಾಪ್ತೆ ಶಾಲೆಯ ಆವರಣದಲ್ಲಿರುವ ನೀರಿನ ಟ್ಯಾಂಕ್ ಬಳಿ ನೀರು ಕುಡಿಯಲು ಹೋದಾಗ ಆರೋಪಿ, ಬಾಲಕಿಯ ಮೈ ಕೈ ಹಿಡಿದು ಅವಳೊಂದಿಗೆ ಕೆಟ್ಟದಾಗಿ ವರ್ತಿಸಿ ಆಕೆಯ ಅಂಗಾಂಗ ಮುಟ್ಟಿದ್ದಾನೆ. ಆಗ ಆಕೆ ನನಗ್ಯಾಕ ಹೀಗ ಮಾಡಾತಿ ಎಂದು ಕೇಳಿದಾಗ ಅವನು ಅವಳಿಗೆ ತನ್ನ ಲೈಂಗಿಕ ಚಟ ತೀರಿಸಿಕೊಳ್ಳುವ ಉದ್ದೇಶದಿಂದ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಅಪರಾಧ ಪ್ರಕರಣಕ್ಕೆ ಪ್ರಕರಣದ ಬಗ್ಗೆ ತನಿಖಾಧಿಕಾರಿ ದೇವರಾಜ ಎಸ್ ಉಳ್ಳಾಗಡ್ಡಿ ಅವರು ತನಿಖೆ ಮಾಡಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ ಬೆಳಗಾವಿ-01 ಇಲ್ಲಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಸಿ.ಎ. ಪುಷ್ಪಲತಾ 5 ಸಾಕ್ಷಿಗಳ ವಿಚಾರಣೆ, 17 ದಾಖಲೆ ಮತ್ತು ಇತರ ಸಾಕ್ಷಿಗಳ ಆಧಾರದ ಮೇಲೆ ಆರೋಪಿ ಮಹೇಶ ದೇಸಾಯಿ ಮೇಲಿನ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಆರೋಪಿತನಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 5000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಂಡದ ಮೊತ್ತ ತುಂಬದೆ ಇದ್ದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್ .ವಿ.ಪಾಟೀಲ ಮಂಡಿಸಿದ್ದರು.