ಬೆಂಗಳೂರು: ಹೋರಾಟವೇ ಇಲ್ಲದೆ ಕನ್ನಡ ಕೈಂಕರ್ಯ ಹೇಗೆ ಮಾಡಬಹುದು ಎಂಬುದನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ತೋರಿಸಿದ್ದಾರೆ. ರಾಜ್ಯದ ಎಲ್ಲ ದೇವಾಲಯಗಳಲ್ಲಿ ಕನ್ನಡದಲ್ಲಿಯೇ ಪೂಜೆ, ಶ್ಲೋಕ, ಮಂತ್ರಪಠಣ ಮಾಡುವಂತೆ ಆದೇಶ ಮಾಡಿದ್ದಾರೆ.
ಈಗಾಗಲೇ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿರುವ ರಾಮಲಿಂಗಾ ರೆಡ್ಡಿ ಅವರು, ಇದೀಗ ಕನ್ನಡಿಗರು ಮೆಚ್ಚುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಮೂಲಕ ದೇವಸ್ಥಾನಗಳಲ್ಲಿ ಜನರಿಗೆ ಅರ್ಥವಾಗದ ಸಂಸ್ಕೃತ ಭಾಷೆಯಲ್ಲಿ ನಡೆಯುತ್ತಿದ್ದ ಪೂಜೆ, ಶ್ಲೋಕ ಪಠಣವನ್ನು ಕನ್ನಡೀಕರಣಗೊಳಿಸಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34,559 ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪ್ರಾರ್ಥನೆ, ಶ್ಲೋಕ, ಮಂತ್ರ ಪಠಣ ಇನ್ನು ಮುಂದೆ ಕನ್ನಡದಲ್ಲಿಯೇ ಇರಲಿದೆ. ಸರಕಾರದ ಈ ತೀರ್ಮಾನಕ್ಕೆ ಕನ್ನಡಿಗರು, ಕನ್ನಡಪರ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ಕನ್ನಡ ಮನಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅಭಿನಂದಿಸಿದ್ದು, ಕಚೇರಿಗೆ ತೆರಳಿಯೂ ಸನ್ಮಾನಿಸಿ, ಅಭಿನಂದಿಸಿದ್ದಾರೆ.