ಸುದ್ದಿ

ಮರೀಬೇಡಿ ಪ್ಲೀಸ್, ನಾಳೆ ಅಂತಾರಾಷ್ಟ್ರೀಯ ಮರೆವಿನ ದಿನಾಚರಣೆಯಿದೆ !

Share It

“ಆಲ್‌ಝೈಮರ್ ಬಗೆಗೆ ಅರಿವಿರಲಿ”
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಸೆಪ್ಟ್ಂಬರ್ 21 ರಂದು “ವಿಶ್ವ ಆಲ್‌ಝೈಮರ್ ದಿನಾಚರಣೆ” ಯನ್ನು ಆಚರಿಸಲಾಗುತ್ತದೆ. ಈ ದಿನದಂದು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಕಾಯಿಲೆಯ ಬಗೆಗೆ ಅರಿವು ಮೂಡಿಸಲು ಶಾಲಾ ಕಾಲೇಜು ಮತ್ತು ಸಮುದಾಯಗಳಲ್ಲಿ ಜಾಗೃತಿ ಶಿಬಿರಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿ ಆಲ್‌ಝೈಮರ್ ಖಾಯಿಲೆ ಸ್ವರೂಪ, ರೋಗಲಕ್ಷಣಗಳು ಮತ್ತು ನಿರ್ವಹಣೆಯ ಬಗೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತವೆ.

2025ರ ವಿಶ್ವ ಆಲ್‌ಝೈಮರ್ ದಿನಾಚರಣೆ ಧ್ಯೇಯ ವಾಕ್ಯ “ಡಿಮೆನ್‌ಷಿಯಾದ ಬಗ್ಗೆ ಕೇಳಿ” ಎಂಬುದಾಗಿದೆ. ಆಲ್‌ಝೈಮರ್ ಖಾಯಿಲೆಯು ಡಿಮೆನ್‌ಷಿಯಾದ ಒಂದು ವಿಧವಾಗಿದೆ. ಇದರ ಬಗ್ಗೆ ಮುಕ್ತವಾಗಿ ಸಂಭಾಷಣೆಗಳನ್ನು ನಡೆಸಲು ಮತ್ತು ಆಲ್‌ಝೈಮರ್‌ನಿಂದ ಬಳಲುವ ವ್ಯಕ್ತಿಗಳಿಗೆ ಸಮುದಾಯದ ಬೆಂಬಲದ ಅಗತ್ಯತೆಯನ್ನು ಅರ್ಥ ಮಾಡಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಆಲ್‌ಝೈಮರ್ ಗಂಭೀರವಾದ ಖಾಯಿಲೆಯಾಗಿದೆ. ಜರ್ಮನ್ ವೈದ್ಯರಾದ ಡಾ. ಆಲೋಯಿಸ್ ಆಲ್‌ಝೈಮರ್ ಎಂಬುವವರು ಈ ಖಾಯಿಲೆಯ ರೋಗಲಕ್ಷಣಗಳನ್ನು ಮೊದಲಿಗೆ ಗುರುತಿಸಿ ಪರಿಚಯ ಮಾಡಿದ ಕಾರಣದಿಂದಾಗಿ ಈ ಕಾಯಿಲೆಯನ್ನು “ಆಲ್‌ಝೈಮರ್” ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಜಗತ್ತಿನಾದ್ಯಾಂತ ಸುಮಾರು 55 ಮಿಲಿಯನ್‌ಗೂ ಹೆಚ್ಚು ಜನರು ಆಲ್‌ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯವಾಗಿ ಮಧ್ಯವಯಸ್ಸಿನ ಕೊನೆಯಲ್ಲಿ ಅಥವಾ ವೃದ್ಧಾಪ್ಯದಲ್ಲಿ ಹೆಚ್ಚಾಗಿ ಕಂಡುಬರುವ ಖಾಯಿಲೆಯಾಗಿದೆ. ಇದು ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡುತ್ತದೆ.

ಖಾಯಿಲೆಗೆ ಕಾರಣಗಳು:
•ಆಲ್‌ಝೈಮರ್ ಖಾಯಿಲೆಗೆ ವಯಸ್ಸು ಪ್ರಾಥಮಿಕ ಕಾರಣವಾಗಿದೆ. 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರಲ್ಲಿ ಅರ್ಧದಷ್ಟು ಜನರಲ್ಲಿ ಈ ರೋಗವು ಕಂಡುಬರುವ ಸಾಧ್ಯತೆಯಿದೆ.

•ಧೂಮಪಾನ, ಮದ್ಯಪಾನ ಮತ್ತು ಮಾದಕ ವ್ಯಸನದಂತಹ ನಕಾರಾತ್ಮಕ ಜೀವನ ಶೈಲಿಯು ಈ ಖಾಯಿಲೆಗೆ ಪ್ರಮುಖ ಕಾರಣವಾಗಿರುತ್ತದೆ.

•ಮೆದುಳಿನ ನರಕೋಶಗಳಲ್ಲಿ ಅಪಸಾಮಾನ್ಯವಾದ ಪ್ರೋಟೀನ್ ಶೇಖರಣೆಯಾಗುವುದರಿಂದ ಇದು ನರತಂತುಗಳನ್ನು ಹಾನಿಮಾಡುತ್ತದೆ. ಮತ್ತು ನರಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಮೆದುಳಿನಲ್ಲಿರುವ ನರತಂತುಗಳು ಮತ್ತು ನರಕೋಶಗಳಲ್ಲಿ ತೊಂದರೆ ಉಂಟಾದಾಗ ಅದಕ್ಕೆ ಸಂಬಂಧಪಟ್ಟ ದೈಹಿಕ ಮತ್ತು ಸಂಜ್ಞಾನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಂದರೆಗಳು ಕಂಡುಬರುತ್ತವೆ.

•ಮೆದುಳಿಗೆ ಉಂಟಾಗುವ ಪೆಟ್ಟು ಅಥವಾ ಹಾನಿ.
•ಒತ್ತಡ ಮತ್ತು ಅಧಿಕ ರಕ್ತದೊತ್ತಡ ಹೃದಯ ಸಂಬAಧಿ ಸಮಸ್ಯೆಗಳು ಸಹ ಈ ಖಾಯಿಲೆಗೆ ಕಾರಣ.

ರೋಗಲಕ್ಷಣಗಳು: ಆಲ್‌ಝೈಮರ್ ಖಾಯಿಲೆಯಿಂದ ಬಳಲುವ ವ್ಯಕ್ತಿಗಳಲ್ಲಿ ಕೆಳಕಂಡ ರೋಗಲಕ್ಷಣಗಳು ಕಂಡುಬರುತ್ತವೆ.

•ಇವರಲ್ಲಿ ಕ್ರಮೇಣವಾಗಿ ಸ್ಮರಣ ಸಾಮರ್ಥ್ಯವು ಕ್ಷೀಣಿಸುತ್ತದೆ. ಉದಾಹರಣೆಗೆ ಜೀವನದ ಪ್ರಮುಖ ಘಟನೆಗಳನ್ನು ಮತ್ತು ಮಾಹಿತಿಗಳನ್ನು ಮರೆಯುತ್ತಾರೆ.
•ಆಲೋಚನಾ ಮತ್ತು ವಿವೇಚನಾ ಕೌಶಲ್ಯಗಳು ಕುಸಿಯುತ್ತವೆ. ಉದಾಹರಣೆಗೆ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಆಲೋಚನಾ ಸಾಮರ್ಥ್ಯವಿರುವುದಿಲ್ಲ.

•ಸಂಶಯಗ್ರಸ್ಥ ಭ್ರಮೆ ಮತ್ತು ವಿಭ್ರಮೆಗಳು ಕಂಡುಬರುತ್ತವೆ. ಉದಾಹರಣೆಗೆ ಯಾರೋ ನನಗೆ ಹಾನಿ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಸಂಶಯಗ್ರಸ್ಥ ಭ್ರಮೆಗಳನ್ನು ವ್ಯಕ್ತಪಡಿಸುತ್ತಾರೆ.

•ಪರಿಚಿತರು ಮತ್ತು ಕುಟುಂಬದ ಸದಸ್ಯರುಗಳ ಹೆಸರುಗಳನ್ನು ಮತ್ತು ಮಾಹಿತಿಯನ್ನು ಮರೆಯುತ್ತಾರೆ. ಉದಾಹರಣೆಗೆ ಹೆಂಡತಿ, ಮಕ್ಕಳು, ತಂದೆ, ತಾಯಿಯ ಹೆಸರುಗಳನ್ನು ಮರೆತುಬಿಡುತ್ತಾರೆ.

•ಇತರರೊಂದಿಗೆ ಸಂಭಾಷಣೆ ಮಾಡಲು, ಪದಗಳನ್ನು ನೆನಪಿಸಿಕೊಳ್ಳಲು ಮತ್ತು ವಾಕ್ಯಗಳನ್ನು ರಚಿಸಲು ಕಷ್ಟಪಡುತ್ತಾರೆ.

•ವಸ್ತುಗಳನ್ನು ಸೂಕ್ತ ಸ್ಥಳಗಳಲ್ಲಿ ಇಡುವುದನ್ನು ಮರೆತು ಬೇರೆ ಸ್ಥಳಗಳಲ್ಲಿ ತಪ್ಪಾಗಿ ಇಡುತ್ತಾರೆ. ಉದಾಹರಣೆಗೆ ಟೂತ್ ಪೇಸ್ಟ್ ಅಡುಗೆ ಮನೆಯಲ್ಲಿ ಇಡುವುದು.

•ದೈನಂದಿನ ಜೀವನದ ಪ್ರತಿಯೊಂದು ಚಟವಟಿಕೆಗಳಿಗೂ ಇತರರ ನೆರವಿನ ಅಗತ್ಯವಿರುತ್ತದೆ.

•ಸಂಯಮದ ಕೊರತೆ, ನಿಷ್ಟ್ರಿಯತೆ ಮತ್ತು ಸೋಮಾರಿತನ ಲಕ್ಷಣಗಳು ಕಂಡುಬರುತ್ತವೆ.

•ಮಾನಸಿಕ ತಳಮಳ, ಅಭದ್ರತೆ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ವ್ಯಕ್ತಿತ್ವ ಮತ್ತು ವರ್ತನೆಗಳಲ್ಲಿ ವೈಪರಿತ್ಯಗಳು ಕಂಡುಬರುತ್ತವೆ.

•ಇವರಲ್ಲಿ ಸ್ಥಳ ಮತ್ತು ಸಮಯ ಪ್ರಜ್ಞೆ ನಾಶವಾಗಿರುತ್ತದೆ.
•ಓದಲು ಮತ್ತು ಭಾಷೆ ಅರ್ಥಮಾಡಿಕೊಳ್ಳಲು ಕಷ್ಟಪಡುವರು.
•ಇವರು ಕೀಳರಿಮೆ ಮತ್ತು ಭಾವನಾತ್ಮಕ ತೊಂದರೆಗಳನ್ನು ವಿಪರೀತವಾಗಿ ಅನುಭವಿಸುತ್ತಾರೆ.
• ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಸಂಜ್ಞಾನಾತ್ಮಕ ಸಾಮರ್ಥ್ಯ ಕ್ಷೀಣಿಸಿರುತ್ತದೆ.
• ಸ್ಮರಣೆಯ ಸಮಸ್ಯೆಯಿಂದಾಗಿ ಹೊಸ ವಿಷಯಗಳನ್ನು ಕಲಿಯಲು ಕಷ್ಟಪಡುತ್ತಾರೆ.
• ಯಾವುದಾದರೂ ಒಂದು ಕೆಲಸವನ್ನು ಪ್ರಾರಂಭಿಸಿ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿಯದೇ ಗೊಂದಲಕ್ಕೆ ಒಳಗಾಗಿ ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವುದಿಲ್ಲ.

ಪ್ರಾರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ಗುರುತಿಸಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು:
ಆಲ್‌ಝೈಮರ್ ರೋಗಲಕ್ಷಣಗಳ ಮುನ್ಸೂಚನೆಗಳು ವ್ಯಕ್ತಿಯಲ್ಲಿ ಕಂಡು ಬಂದ ತಕ್ಷಣ ಅವುಗಳನ್ನು ನಿರ್ಲಕ್ಷಮಾಡದೆ ತಕ್ಷಣವೇ ನರರೋಗಶಾಸ್ತçಜ್ಞರು, ಮನೋವೈದ್ಯರುಗಳನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕ. ವೈದ್ಯರ ಸಲಹೆ ಮೇರೆಗೆ ಮಾನಸಿಕ ಸ್ಥಿತಿ ಪರೀಕ್ಷೆಗಳು, ಸಂಜ್ಞಾನಾತ್ಮಕ ಸಾಮರ್ಥ್ಯ ಪರೀಕ್ಷೆಗಳು, ಮೆದುಳಿನ ಕಾರ್ಯಚಟುವಟಿಕೆ ಮತ್ತು ಸಾಮರ್ಥ್ಯಗಳನ್ನು ಮಾಪನ ಮಾಡುವಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ. ರೋಗಲಕ್ಷಣಗಳನ್ನು ಆಧಾರಿಸಿ ವೈದ್ಯರು ನೀಡುವ ಚಿಕಿತ್ಸೆಗಳು ಮತ್ತು ಸಲಹೆ ಸೂಚನೆಗಳನ್ನು ಪಾಲಿಸಬೇಕು.
ಆರೈಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು:
•ಆಲ್‌ಝೈಮರ್ ರೋಗಿಗಳಿಗೆ ದೈಹಿಕ ಮತ್ತು ಮಾನಸಿಕ ಆರೈಕೆಯು ಅತ್ಯಗತ್ಯವಾಗಿದೆ. ಕುಟುಂಬದ ಸದಸ್ಯರು ಅಥವಾ ಆರೈಕೆ ಮಾಡುವವರು ರೋಗಿಗಳ ಅಗತ್ಯಗಳಿಗೆ ಅನುಗುಣವಾಗಿ ಯೋಜಿತವಾದ ದೈನಂದಿನ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡು ಸಮತೋಲಿತವಾದ ಆಹಾರ ನೀಡುವುದು, ವ್ಯಾಯಾಮ ಮಾಡಿಸುವುದು ಮತ್ತು ಆಟದ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಂಡು ಆರೈಕೆ ಮಾಡುವುದು.
•ಸಮಾಜದ ಮುಖ್ಯವಾಹಿನಿಗೆ ತರಲು ಸಮೂಹದ ಕಾರ್ಯಚಟುವಟಿಕೆಗಳಲ್ಲಿ ಮತ್ತು ಇತರರೊಂದಿಗೆ ಸಂವಹನ ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವುದು.
•ಸೋಮಾರಿತನ ಮತ್ತು ನಿಷ್ಕಿçÃಯತೆ ಭಾವನೆಗಳಿಂದ ಹೊರಬರಲು ನಡಿಗೆ, ವ್ಯಾಯಾಮ, ಯೋಗ, ಧ್ಯಾನ, ತೋಟಗಾರಿಕೆಯಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವುದು.
•ಆಲ್‌ಝೈಮರ್ ಖಾಯಿಲೆಗೆ ಒಳಗಾದವರಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿರುತ್ತದೆ. ಆದಕಾರಣ ಇವರುಗಳು ಪ್ರತಿದಿನ ಕನಿಷ್ಠ ೮ ಗಂಟೆಯಷ್ಟು ನಿದ್ರೆಯನ್ನು ಮಾಡುವಂತೆ ದಿನಚರಿಯನ್ನು ರೂಪಿಸಿ ನೋಡಿಕೊಳ್ಳುವುದು
•ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತಹ ಕ್ರಿಯಾಚಟುವಟಿಕೆಗಳಾದ ಪದಬಂಧ ಬಿಡಿಸುವುದು, ಚೆಸ್ ಆಟ ಆಡುವುದು, ಚಿತ್ರಕಲೆ ಬಿಡಿಸುವುದು, ಸಂಗೀತ ವಾದ್ಯಗಳನ್ನು ನುಡಿಸುವಂತಹ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು.

ಆಲ್‌ಝೈಮರ್ ರೋಗದಿಂದ ಬಳಲುವ ವ್ಯಕ್ತಿಗಳಿಗೆ ಕುಟುಂಬ, ನೆರೆಹೊರೆಯವರು ಮತ್ತು ಸಮುದಾಯ ಸಹಾನುಭೂತಿಯನ್ನು ತೋರುವುದರೊಂದಿಗೆ ಭಾವನಾತ್ಮಕವಾಗಿ ಬೆಂಬಲವಾಗಿ ನಿಲ್ಲಬೇಕು ಇದರಿಂದ ಅವರುಗಳ ಮನೋಸ್ಥೈರ್ಯ ಹೆಚ್ಚಾಗುತ್ತದೆ ಮತ್ತು ಅವರುಗಳು ರೋಗಲಕ್ಷಣಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

ಡಾ. ಮಂಜುನಾಥ.ಪಿ
ಮುಖ್ಯಸ್ಥರು
ಮನಶಾಸ್ತ್ರಜ್ಞ ವಿಭಾಗ
ಕರಾಮುವಿ, ಮೈಸೂರು
9535547702


Share It

You cannot copy content of this page