ಬೆಂಗಳೂರು: ೨೦೨೫ ವರ್ಷದ ಅಂತ್ಯದವರೆಗೆ ಅಧಿಕಾರಿಗಳ ಎಲ್ಲ ಅಧಿಕೃತ ವಿದೇಶ ಪ್ರವಾಸಗಳಿಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ತಕ್ಷಣದಿಂದ ಈ ಆದೇಶ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
೨೦೨೪ನೇ ಸಾಲಿನ ಆಗಸ್ಟ್ ತಿಂಗಳಿನಿAದ ಇದೇ ಜುಲೈ ತಿಂಗಳವರೆಗೆ ಸರ್ಕಾರಿ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿದ, ಕಲಿಕೆ ಹಾಗೂ ಶಿಫಾರಸುಗಳೊಂದಿಗೆ ಒಂದು ವಾರದ ಒಳಗೆ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಹಲವು ಅಧಿಕಾರಿಗಳು ಸಲ್ಲಿಸದಿರುವುದು ಗಮನಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಅಧಿಕೃತ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸುವ ಮೊದಲು ಈ ಹಿಂದೆ ಕೈಗೊಂಡಿರುವ ಪ್ರವಾಸಗಳ ಕಲಿಕೆ ಹಾಗೂ ಅನುಷ್ಠಾನ ವರದಿಯನ್ನು ನೀಡಿದ್ದರೆ ಮಾತ್ರ, ಹಾಲಿ ಪ್ರವಾಸದ ಪ್ರಸ್ತಾವಕ್ಕೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.