ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ಸಿಐಡಿ ಪೊಲೀಸ್ ಠಾಣೆ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದಿಂದ ಬೇರೊಂದು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, ಅರ್ಜಿಗಳನ್ನು ವಜಾ ಮಾಡಿ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೆ.20ರಂದು ಆದೇಶಿಸಿದೆ.
ಅಲ್ಲದೆ, ತಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣಗಳಲ್ಲಿ 82ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು) ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆ ಹೊಂದಿದ್ದಾರೆ. ನ್ಯಾಯಸಮ್ಮತವಾಗಿ ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಬೇರೊಂದು ಸೆಷನ್ಸ್ ನ್ಯಾಯಾಲಯಕ್ಕೆ ವಿಚಾರಣೆ ವರ್ಗಾಯಿಸಬೇಕು ಎಂದು ಕೋರಿದ್ದರು.
ವಾದ ಆಲಿಸಿದ ಪೀಠ, ವಿಚಾರಣಾ ನ್ಯಾಯಾಲಯವು ದಿನನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಲು ಉದ್ದೇಶಿಸಿದಂತಿದೆ. ಈ ಪ್ರಕ್ರಿಯೆಯಲ್ಲಿ ಅರ್ಜಿದಾರರು ವಿಚಾರಣೆ ಮುಂದೂಡುವಂತೆ ಮಾಡಿರುವ ಮನವಿಗಳನ್ನು ತಿರಸ್ಕರಿಸಿರಬಹುದು. ತೀರ್ಪಿನಲ್ಲಿನ ಕೆಲ ಅವಲೋಕನಗಳು ಕಠಿಣವೆಂದೆನಿಸಿದರೂ, ಅದನ್ನು ನ್ಯಾಯಾಧೀಶರ ಪಕ್ಷಪಾತ ನಡೆ ಎಂದು ಅರ್ಥೈಸಲಾಗದು.
ಅರ್ಜಿದಾರರು ಪ್ರಕರಣದ ವಿಚಾರಣೆ ವಿಳಂಬ ಮಾಡಲು ಯತ್ನಿಸಿದ್ದು, ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಇದನ್ನೇ ವರ್ಗಾವಣೆಗೆ ಆಧಾರವೆನ್ನುವುದಾದರೆ, ಬಹುತೇಕ ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಇಂತಹ ಅರ್ಜಿಗಳು ಇರುತ್ತವೆ. ಇದನ್ನು ನ್ಯಾಯಾಲಯ ಅನುಮತಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.