ಬೆಂಗಳೂರು: ಅಗ್ನಿ ಅವಘಡದಿಂದ ೧೯ ಇವಿ ಬೈಕುಗಳು ಸುಟ್ಟಿರುವ ಘಟನೆ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡದಲ್ಲಿ ನಡೆದಿದೆ.
ಡಾಮಿನೋಸ್ ಪಿಜ್ಜಾ ಪಾರ್ಕಿಂಗ್ ಆವರಣದಲ್ಲಿ ಚಾರ್ಜ್ ಆಗುತ್ತಿದ್ದ ಬೈಕ್‌ಗಳಿಗೆ ಬೆಂಕಿ ತಗುಲಿ, ಬೇಸ್‌ಮೆಂಟ್‌ನಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರ ತಕ್ಷಣದ ಮಾಹಿತಿಯ ಮೇಲೆ ಅಗ್ನಿಶಾಮಕ ಇಲಾಖೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ: ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಇವಿ ಬೈಕ್‌ಗಳ ಚಾರ್ಜಿಂಗ್ ಪಾಯಿಂಟ್ ಇದ್ದು, ಅಲ್ಲಿ ಶಾರ್ಟ್ ಸರ್ಕ್ಯೂಟ್ ಶಂಕೆಯಿದೆ. ಚಾರ್ಜ್ ಆಗುತ್ತಿದ್ದ ಬೈಕ್‌ಗಳಲ್ಲಿ ಒಂದರಲ್ಲಿ ಓವರ್ ಹೀಟ್ ಉಂಟಾಗಿ ಬೆಂಕಿ ತಗುಲಿದ್ದು, ಅದು ಹೊತ್ತಿ ಉರಿದಿದೆ. ಇದಾದ ನಂತರ ಹತ್ತಿರದ ಬೈಕ್‌ಗಳಿಗೆ ಹೊತ್ತಿಕೊಂಡಿದೆ.
ಬೇಸ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಾಯಿಂಟ್‌ನಲ್ಲಿದ್ದ ವೈರ್‌ಗೆ ಬೆಂಕಿ ತಗುಲಿ ಗ್ಯಾಸ್ ಲೀಕ್ ಉಂಟಾಗಿ, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಒಟ್ಟು ಆರು ಸಿಲಿಂಡರ್‌ಗಳಲ್ಲಿ ಇನ್ನೂ ಸಣ್ಣದಾಗಿ ಗ್ಯಾಸ್ ಸೋರಿಕೆಯಾಗಿ, ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಸ್ಥಳೀಯರು ಬೆಂಕಿ ಕೆನ್ನಾಲಿಗೆ ಕಂಡು ನಿವಾಸಿಗಳು ಭಯಭೀತರಾದರು.