ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆರೋಪದಡಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಬಿಗ್ ಬಾಸ್ ಮನೆಗೆ ಬೀಗಮುದ್ರೆ ಜಡಿದಿರುವ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ವೇಲ್ಸ್ ಸ್ಟೂಡಿಯೋ ಆ್ಯಂಡ್ ಎಂಟರ್ಟ್ರೈನ್ಮೆಂಟ್ ಲಿಮಿಟೆಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಪ್ರಕರಣ ಸಂಬಂಧ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕೆಂದು ಕೋರಿ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ನ್ಯಾಯಪೀಠದ ಮುಂದೆ ಬುಧವಾರ ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಮಧ್ಯಾಹ್ನ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಸ್ಥೆ, ಬಿಡದಿಯ ಕೈಗಾರಿಕಾ ಪುದೇಶದಲ್ಲಿರುವ ಜಾಲಿವುಡ್ ಪಾರ್ಕ್ಗೆ ಬಳಸುವ ನೀರನ್ನು ಸಂಸ್ಕರಿಸದೆ ಹಾಗೆಯೇ ಹೊರಕ್ಕೆ ಬಿಡಲಾಗುತ್ತಿತ್ತು. ಪಾರ್ಕ್ ಒಳಗೆ ೨೫೦ ಕೆಎಲ್ಡಿ (ಕಿಲೋಲೀಟರ್) ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಿಸುವ ಎಸ್ಟಿಪಿ (ಕೊಳಚೆ ನೀರು ಸಂಸ್ಕರಣೆ ಘಟಕ) ಇದೆ ಎಂದು ಸಂಸ್ಥೆ ಹೇಳಿದರೂ ಘಟಕ ಕೆಲಸ ಮಾಡುತ್ತಿಲ್ಲ.
ಪಾರ್ಕ್ನಲ್ಲಿ ೬೨೫ ಕೆವಿಎ ಮತ್ತು ೫೦೦ ಕೆವಿಎ ಡಿ.ಜೆ. ಸೆಟ್ ಅಳವಡಿಸಿರುವುದರಿಂದ ಪರಿಸರ ಮತ್ತು ಶಬ್ದಮಾಲಿನ್ಯ ಉಂಟಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲ. ಹಸಿ ಮತ್ತು ಒಣ ಕಸ ವಿಂಗಡಿಸದೆ ಹಾಗೆಯೇ ವಿಲೇವಾರಿ ಮಾಡಲಾಗುತ್ತಿದೆ ಎಂಬುದಾಗಿ ಆರೋಪಿಸಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದರೂ ನೋಟಿಸ್ ಅನ್ನು ಸ್ವೀಕರಿಸಿರಲಿಲ್ಲ.
ಇದರಿಂದಾಗಿ ಜಿಲ್ಲಾಡಳಿತವು ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ಸ್ಟೂಡಿಯೋಗೆ ಬೀಗಮುದ್ರೆ ಜಡಿದಿತ್ತು. ಇದನ್ನು ಪ್ರಶ್ನಿಸಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನೋಟಿಸ್‌ಗೆ ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನೆಲೆ ಪಾರ್ಕ್ನ ಮನೆಗೆ ಬೀಗಮುದ್ರೆ ಹಾಕಿಲಾಗಿದ್ದು, ಬಿಗ್ಬಾಸ್ ಸ್ಪರ್ಧಾಳುಗಳನ್ನು ರೆಸಾರ್ಟ್ವೊಂದಕ್ಕೆ ಸ್ಥಳಾಂತರ ಮಾಡಲಾಗಿದೆ. ರಾತ್ರಿಯೇ ಬಿಗ್ ಬಾಸ್ ಮನೆಯನ್ನು ಖಾಲಿ ಮಾಡಬೇಕು ಎನ್ನುವ ಅಧಿಕಾರಿಗಳ ಸೂಚನೆ ಮೇರೆಗೆ ಆಯೋಜಕರು ತುರ್ತು ಸಭೆ ನಡೆಸಿದ್ದು, ಇದರಿಂದ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು, ಸಿಬ್ಬಂದಿಯನ್ನು ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ.
ಸ್ಥಳದಲ್ಲಿ ಕಾರುಗಳ ಮೂಲಕ ಸ್ಪರ್ಧಿಗಳನ್ನು ಖಾಸಗಿ ಹೋಟೆಲ್‌ಗೆ ರವಾನಿಸಲಾಗಿದೆ. ಒಂದು ವೇಳೆ ಸಮಸ್ಯೆ ಬಗೆಹರಿದರೆ ಮತ್ತೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನು ಕರೆತರಲಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.