ಅಪರಾಧ ರಾಜಕೀಯ ಸುದ್ದಿ

ಆರ್​. ಅಶೋಕ್​ ಅವರ ಪೊಲೀಸ್​​ ಬೆಂಗಾವಲು ವಾಹನದ ಚಾಲಕ ಶರಣಪ್ಪ ಆತ್ಮಹತ್ಯೆ

Share It

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಅವರ ಪೊಲೀಸ್​​ ಬೆಂಗಾವಲು ವಾಹನದ ಚಾಲಕ (ನಗರ ಸಶಸ್ತ್ರ ಮೀಸಲು ಪೊಲೀಸ್​ ಪಡೆ) ಶರಣಪ್ಪ (೩೩) ಅವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಬಾಪೂಜಿನಗರದ ಬಾಡಿಗೆ ಮನೆಯಲ್ಲಿ ಶರಣಪ್ಪ ಅವರು ಪತ್ನಿ ಶೈಲಶ್ರೀ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ನೆಲೆಸಿದ್ದರು. ಶೈಲಶ್ರೀ ಅವರು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶರಣಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಕಲಬುರಗಿ ಜಿಲ್ಲೆಯ ಶರಣಪ್ಪ ಅವರು ಕಳೆದ ಎರಡೂವರೆ ವರ್ಷದಿಂದ ಅಶೋಕ್​​ ಬೆಂಗಾವಲು ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಶರಣಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ತುಂಬಾ ಒಳ್ಳೆಯ ಹುಡುಗ, ನನ್ನ ಜೊತೆ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಮೊನ್ನೆ ನನ್ನನು ಬಿಟ್ಟು ಸೆಲ್ಯೂಟ್ ಮಾಡಿ ಹೋದ. ಆದರೆ ಇಂದು ಮನೆಯಲ್ಲಿ ೬ ಗಂಟೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖರ ಕಾರಣ ಇನ್ನು ಸಹ ತಿಳಿದು ಬಂದಿಲ್ಲ. ಯಾವುದೇ ಡೆತ್‌ನೋಟ್ ಸಹ ಇನ್ನು ಸಿಕ್ಕಿಲ್ಲ ಎಂದರು.

ಬೆಂಗಾಲು ವಾಹನಕ್ಕೆ ಇಬ್ಬರು ಚಾಲಕರು ಇರುತ್ತಾರೆ. ಅದರಲ್ಲಿ ಒಬ್ಬ ಶರಣಪ್ಪ. ಶರಣಪ್ಪ ಇವತ್ತು ಬರಬೇಕಾಗಿತ್ತು. ಬೆಳಗ್ಗೆ ಬಂದು ಇನ್ನೊಬ್ಬ ಚಾಲಕನಿಗೆ ನಾನು ಮಂತ್ರಾಲಯಕ್ಕೆ ಹೋಗುತ್ತಿದ್ದೇನೆ, ಇನ್ನೊಂದು ದಿನ ನೀನೇ ಮುಂದುವರೆಸು ನಾನು ಇಂದು ಬರಲ್ಲ ಎಂದು ಹೇಳಿ ಹೋಗಿದ್ದ. ನನ್ನ ಬಳಿ ಎರಡು ವರ್ಷ ಬೆಂಗಾಲು ವಾಹನದ ಚಾಲಕನಾಗಿ ಕೆಲಸ ಮಾಡಿದ್ದಾನೆ. ಒಂದು ದಿನ ಕೂಡ ನಮ್ಮ ಜೊತೆ ಮಾತಾಡಿಲ್ಲ, ಬಹಳ ಸೈಲೆಂಟ್​ ಮನುಷ್ಯ. ನನಗೆ ತಿಳಿದಿರುವ ಹಾಗೇ ಆತನಿಗೆ ಯಾವುದೇ ದುರಾಭ್ಯಾಸ ಇದ್ದಿರಲಿಲ್ಲ ಎಂದರು.

ಅವರ ಪತ್ನಿ ಕೂಡ ಟ್ರಾಫಿಕ್​ ಪೊಲೀಸ್​ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬವೂ ಕೂಡ ಚೆನ್ನಾಗಿದೆ. ನನಗೆ ಅನಿಸುವ ಹಾಗೇ ಯಾವುದೇ ಆರ್ಥಿಕ ಸಮಸ್ಯೆ ಇದ್ದಿರಲಿಲ್ಲ. ಒಳ್ಳೆ ಹುಡುಗ. ನನಗೂ ಆತನ ಸಾವಿನಿಂದ ನೋವಾಗಿದೆ ಎಂದು ತಿಳಿಸಿದರು.


Share It

You cannot copy content of this page