ರಾಜಕೀಯ ಸುದ್ದಿ

ಸಚಿವ ಸಂಪುಟ ಪುನಾರಚನೆ ವಿಚಾರ ನನಗೆ ಗೊತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Share It

ಬೆಂಗಳೂರು: “ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. “ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನನ್ನ ಜೊತೆ ಈ ವಿಚಾರ ಚರ್ಚೆ ಮಾಡಿದರೆ ನಾನು ನನ್ನ ಸಲಹೆ ನೀಡುತ್ತೇನೆ. ಈ ವಿಚಾರವಾಗಿ ಅನಗತ್ಯ ಚರ್ಚೆ ಮಾಡಿ ಗೊಂದಲ ಸೃಷ್ಟಿಸಬೇಡಿ ಎಂದು ನಿಮ್ಮಲ್ಲಿ (ಮಾಧ್ಯಮ) ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಔತಣಕೂಟ ಆಯೋಜಿಸಿರುವ ಬಗ್ಗೆ ಕೇಳಿದಾಗ, “ಇದರಲ್ಲಿ ತಪ್ಪೇನಿದೆ? ಒಟ್ಟಿಗೆ ಸೇರಿ ಊಟ ಮಾಡಿ, ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಸಹಜ” ಎಂದು ತಿಳಿಸಿದರು.

ಬಿಗ್ ಬಾಸ್ ವಿಚಾರವಾಗಿ ಕೇಳಿದಾಗ, “ಬುಧವಾರ ರಾತ್ರಿ ಡಿಸಿಗೆ ಕರೆ ಮಾಡಿ ಜಾಲಿವುಡ್ ಸ್ಟುಡಿಯೋದವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕಲ್ಪಿಸಿ ಎಂದು ಸೂಚಿಸಿದ್ದೇನೆ. ನಮ್ಮ ಉದ್ಯಮ ಬೆಳೆಯಬೇಕು. ಇದು ಹೆಚ್ಚಿನ ಮಾಲಿನ್ಯ ಉಂಟು ಮಾಡಲು ದೊಡ್ಡ ಕಾರ್ಖಾನೆಯಲ್ಲ. ಸಣ್ಣಪುಟ್ಟ ನಿಯಮ ಉಲ್ಲಂಘನೆಯಾಗಿದ್ದರೆ ಸರಿಪಡಿಸಿಕೊಳ್ಳಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿಯನ್ನು ಪಾಲನೆ ಮಾಡಿ ಎಂದು ಸ್ಟುಡಿಯೋದವರಿಗೂ ಹೇಳಿ ಕಳುಹಿಸಿದ್ದೇನೆ” ಎಂದು ತಿಳಿಸಿದರು.


Share It

You cannot copy content of this page