ಕಲಬುರಗಿ: ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದ ಸೆಷನ್ ಕೋರ್ಟ್ ಆದೇಶವನ್ನು ಕಲಬುರಗಿ ಹೈಕೋರ್ಟ್ ಪೀಠ ಎತ್ತಿಹಿಡಿದಿದೆ.
ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ತಂಗಿಯನ್ನೇ ಜೀವಂತ ಸುಟ್ಟುಹಾಕಿದ್ದ ಸಹೋದರರಿಗೆ ಹೈಕೋರ್ಟ್ ಶಿಕ್ಷೆ ಖಾಯಂಗೊಳಿಸಿದೆ. ವಿಜಯಪುರ ಸೆಷನ್ಸ್ ನ್ಯಾಯಾಲಯ ಮೃತಳ ಸಹೋದರರಾದ ಇಬ್ರಾಹಿಂ ಸಾಬ್ ಹಾಗೂ ಅಕ್ಬರ್ ಎಂಬುವವರಿಗೆ ಮರಣದಂಡನೆ ವಿಧಿಸಿತ್ತು. ತಾಯಿ ಬಾನು ಬೇಗಂ ಹಾಗು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಈ ಆದೇಶವನ್ನು ಕಲಬುರಗಿ ಹೈಕೋರ್ಟ್ ಪೀಠ ಖಾಯಂಗೊಳಿಸಿದೆ.
2017 ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗುಂಡನಕಲ್ ಗ್ರಾಮದ ದಲಿತ ಯುವಕ ಸಾಯಿಬಣ್ಣ ಎಂಬುವವನನ್ನು ಪ್ರೀತಿಸಿ, ಮದುವೆಯಾಗಿದ್ದಳು. ಆಕೆ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಆಕೆಯನ್ನು ಜೀವಂತ ಸುಟ್ಟುಹಾಕಿದ್ದರು. ಈ ಸಂಬಂಧ ಬಸವನ ಬಾಗೇವಾಡಿ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಜಯಪುರ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿ, ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿದ್ದ ಅಪರಾಧಿಗಳು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ ಪೀಠ, ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ನೀಡಿದೆ.