ಕಾರಿಗೆ ಅಪರಿಚಿತ ವಾಹನ ಡಿಕ್ಕಿ: ಒಂದೇ ಕುಟುಂಬದ 6 ಜನರ ದುರ್ಮರಣ
ಜೈಪುರ್: ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನವೊಂದು ದಿಢೀರನೆ ಡಿಕ್ಕಿಯಾದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಬನಾಸ್ ನದಿ ಸೇತುವೆ ಬಳಿ ನಡೆದಿದೆ.
ಮೃತರನ್ನು ಮನೀಶ್ ಶರ್ಮಾ, ಇವರ ಪತ್ನಿ ಅನಿತಾ, ಕೈಲಾಶ್ ಶರ್ಮಾ, ಇವರ ಪತ್ನಿ ಸಂತೋಷ ಮತ್ತು ಸತೀಶ್ ಶರ್ಮಾ ಇವರ ಪತ್ನಿ ಪೂನಂ ಎಂದು ಗುರುತಿಸಲಾಗಿದೆ. ಇವರ ಇಬ್ಬರು ಮಕ್ಕಳಾದ ಮನಾನ್ ಮತ್ತು ದೀಪಾಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶರ್ಮಾ ಕುಟುಂಬವು ಸವಾಯಿ ಮಾಧೋಪುರದಲ್ಲಿನ ಗಣೇಶ ದೇವಸ್ಥಾನಕ್ಕೆ ಕಾರಿನ ಮೂಲಕ ಹೋಗುತ್ತಿದ್ದರು. ಈ ವೇಳೆ ಬನಾಸ್ ನದಿಯ ಸೇತುವೆ ಬಳಿ ಹೋಗುವಾಗ ಅತಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಏಕಾಏಕಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 8 ಜನರ ಪೈಕಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಡಿಕ್ಕಿಯಾದ ವಾಹನ ಘಟನಾ ಸ್ಥಳದಲ್ಲೇ ನಿಲ್ಲಿಸದೇ ಅಲ್ಲಿಂದ ಹಾಗೇ ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಆ ಅಪರಿಚಿತ ವಾಹನವನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.


