ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ?
ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ? ಗ್ರೇಟರ್ ನೋಯ್ಡಾ ದೇಶದ ಅತ್ಯಂತ ಕಲುಷಿತ ನಗರ
ಬೆಂಗಳೂರು: ಭಾರತದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗ್ರೇಟರ್ ನೋಯ್ಡಾ ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಗಾಳಿಯಲ್ಲಿ ಉಟಿರಾಟವೂ ಕಷ್ಟ ಎನ್ನಲಾಗುತ್ತಿದೆ.
ಅತ್ಯಂತ ಕಲುಷಿತ ರಾಜಧಾನಿಗಳ ಪಟ್ಟಿಯಲ್ಲಿ ಬಿಹಾರ ರಾಜಧಾನಿ ಪಾಟ್ನಾ ಮೊದಲ ಸ್ಥಾನದಲ್ಲಿದೆ. ಉಳಿದಂತೆ ನಗರಗಳ ಪಟ್ಟಿಯಲ್ಲಿ ೨ನೇ ಅತ್ಯಂತ ಕಲುಷಿತ ನಗರವಾಗಿದೆ. ಭಾನುವಾರ ೩೧೬ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದಾಖಲಾಗುವ ಮೂಲಕ ಈ ಪಟ್ಟಿ ಪಾಟ್ನಾ ಪಾಲಾಗಿದೆ. ಈ ಗುಣಮಟ್ಟವನ್ನು ‘ಅತ್ಯಂತ ಕಳಪೆ’ ಎಂದು ವರ್ಗೀಕರಿಸಲಾಗಿದೆ.
ಬಿಹಾರದಲ್ಲಿಯೇ ಸಿವಾನ್ (೨೮೨), ಮುಜಾಫರ್‌ಪುರ (೨೩೩), ಹಾಜಿಪುರ (೨೩೨) ಮತ್ತು ಬೆಟ್ಟಿಯಾ (೨೨೧) ನಗರಗಳು ಅತ್ಯಂತ ಕಳಪೆ ಎಕ್ಯೂಐ ದಾಖಲಿಸಿದ ಇತರ ನಗರಗಳಾಗಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿರುವ ಗ್ರೇಟರ್ ನೋಯ್ಡಾ ಎಕ್ಯುಐ ೩೪೬ ರೊಂದಿಗೆ ದೇಶದ ಅತ್ಯಂತ ಕಲುಷಿತ ನಗರವಾಗಿದೆ.
ಉತ್ತರ ಭಾರತದ ನಗರಗಳೇ ಹೆಚ್ಚು: ಕಲುಷಿತ ನಗರಗಳ ಪಟ್ಟಿಯಲ್ಲಿ ಉತ್ತರ ಭಾರತದ ನಗರಗಳೇ ಅತಿ ಹೆಚ್ಚು ಪ್ರಮಾಣದಲ್ಲಿವೆ. ದಕ್ಷಿಣ ಭಾರತದ ನಗರಗಳಲ್ಲಿ ಮಾಲಿನ್ಯ ಪ್ರಮಾಣ ಉತ್ತರಕ್ಕೆ ಹೋಲಿಸಿದರೆ ಹೆಚ್ಚಾಗಿಲ್ಲ. ಹೀಗಾಗಿ, ಕಲುಷಿತ ನಗರಗಳ ಪಟ್ಟಿಯಲ್ಲಿ ಉತ್ತರ ಭಾರತವೇ ಟಾಪ್ ಆಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಕಲುಷಿತ ನಗರಗಳ ಪಟ್ಟಿಯಲ್ಲಿ ೩೮ ನೇ ಸ್ಥಾನದಲ್ಲಿದೆ.
ನಂತರದ ಸ್ಥಾನವನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್ ಪಡೆದುಕೊಂಡಿದೆ. ಇನ್ನುಳಿದಂತೆ ದಕ್ಷಿಣ ಭಾರತದ ಯಾವುದೇ ನಗರಗಳು ಇಷ್ಟೊಂದು ಕಳಪೆ ಪರಿಸರವನ್ನು ಹೊಂದಿಲ್ಲದಿರುವುದು ಖುಷಿಯ ವಿಚಾರ. ಆದರೆ, ಮಾಲಿನ್ಯ ನಿಯಂತ್ರಣಕ್ಕೆ ಈಗಿನಿಂದಲೇ ಗಮನಹರಿಸದೇ ಹೋದರೆ, ಮುಂದೆ ಉತ್ತರ ಭಾರತದ ನಗರಗಳ ಸಾಲಿಗೆ ದಕ್ಷಿಣ ಭಾರತದ ನಗರಗಳು ಸೇರುವ ಸಾಧ್ಯತೆಯಿದೆ.
‘ತುಂಬಾ ಕಳಪೆ’ ಗಾಳಿಯ ಗುಣಮಟ್ಟ ದೀರ್ಘಕಾಲದ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತದೆ. ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ, ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚಲು ಗಾಳಿಯ ಕಲುಷಿತ ಪರಿಸರ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ವಾಯುಮಾಲಿನ್ಯವನ್ನು ತಡೆಯುವ ಕ್ರಮವನ್ನು ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಮಾಡಬೇಕು. ಮಾಲಿನ್ಯ ನಿಯಂತ್ರಣವೊAದೇ ನಮ್ಮ ಮುಂದಿರುವ ದಾರಿ ಎನ್ನುತ್ತಾರೆ ತಜ್ಞರು.