ಶಹದೋಲ್(ಮಧ್ಯಪ್ರದೇಶ): ಮರಳು ದಂಧೆಯಲ್ಲಿ ಮಾಮೂಲಿ ಪಡೆದು ಪೊಲೀಸರು ಮೂಕಪ್ರೇಕ್ಷರಾಗ್ತಾರೆ ಅನ್ನೋದು ಸಹಜವಾದ ಆರೋಪ. ಆದರೆ, ಮಧ್ಯಪ್ರದೇಶದಲ್ಲಿ ಮಾಮೂಲಿ ಪಡೆಯದೆ ಮರಳು ದಂಧೆ ತಡೆಯಲು ಹೋದ ಪೊಲೀಸರನ್ನೇ ಮರ್ಡರ್ ಮಾಡಿದ ಘಟನೆ ನಡೆದಿದೆ.
ಅಕ್ರಮ ಮರಳು ಸಾಗಾಟ ಮಾಡುತ್ತಿರುವುದನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿ ಮೇಲೆ ಟ್ರ‍್ಯಾಕ್ಟರ್ ಹರಿಸಿ ಹತ್ಯೆಗೈಯಲಾಗಿದೆ. ಬಿಯೊಹರಿ ಪೊಲೀಸ್ ಠಾಣೆಯ ಎಎಸ್‌ಐ ಮಹೇಂದ್ರ ಬಾಗ್ರಿ ಅವರು ಅಕ್ರಮ ಮರಳು ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಇಬ್ಬರು ಕಾನ್‌ಸ್ಟೇಬಲ್‌ಗಳ ಜತೆ ಪರಿಶೀಲನೆಗೆ ತೆರಳಿದ್ದರು.
ರಾತ್ರಿ ೧ ಗಂಟೆಗೆ ಬಾಡೋಲಿ ಎಂಬ ಗ್ರಾಮದಲ್ಲಿ ಟ್ರಾಕ್ಟರ್ ಮೂಲಕ ಮರಳು ಸಾಗಾಟ ನಡೆಯುತ್ತಿತ್ತು. ಟ್ರಾಕ್ಟರ್‌ನಲ್ಲಿ ಮರಳು ಸಾಗಾಟ ಮಾಡುವುದನ್ನು ಕಂಡು ತಕ್ಷಣವೇ ಅದನ್ನು ತಡೆಯಲು ಮಹೇಂದ್ರ ಬಾಗಿ ಮುಂದಾದರು. ಟ್ರಾಕ್ಟರ್ ಚಾಲಕ ನಿಲ್ಲಿಸಿದೆ, ಪೊಲೀಸ್ ಅಧಿಕಾರಿ ಮಹೇಂದ್ರ ಮೇಲೆಯೇ ಟ್ರಾಕ್ಟರ್ ಹತ್ತಿಸಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಎಎಸ್‌ಐ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜತೆಯಲ್ಲಿದ್ದ ಪೊಲೀಸರು ಓಡಿ ಹೋಗಿ ಪ್ರಾಣಉಳಿಸಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ, ಟ್ರಾಕ್ಟರ್ ಚಾಲಕ ಮಾತ್ರ ಈವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಶಾಹದೋಲ್ ವಲಯ ಎಡಿಜಿಪಿ ಡಿಸಿ ಸಾಗರ್ ಮಾಹಿತಿ ನೀಡಿದ್ದು, “ಈ ಘಟನೆ ಅತ್ಯಂತ ಹೃದಯವಿದ್ರಾವಕ. ಟ್ರ‍್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಿದ್ದು, ಟ್ರಾಕ್ಟರ್ ಮಾಲೀಕ ತಲೆಮರೆಸಿಕೊಂಡಿದ್ದಾನೆ.
ಆತನನ್ನು ಪತ್ತೆ ಹಚ್ಚಿಕೊಟ್ಟವರಿಗೆ ೩೦ ಸಾವಿರ ರು. ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.