RTO ಕಚೇರಿಗಳಲ್ಲಿ ಬ್ರೋಕರ್ ಗಳು ಕಾಣಿಸಿಕೊಂಡರೆ ಅಧಿಕಾರಿಗಳು ಸಸ್ಪೆಂಡ್: ರಾಮಲಿಂಗಾ ರೆಡ್ಡಿ ಎಚ್ಚರಿಕೆ
ಬೆಳಗಾವಿ: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಮಧ್ಯವರ್ತಿಗಳು ಕಾಣಿಸಿಕೊಂಡರೆ, ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಯಾಗಿಸಿ ಅವರನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಟಿಒನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಪರವಾನಗಿ, ಕಲಿಕಾ ಪರವಾನಗಿ ಸೇರಿದಂತೆ 24 ಸೇವೆಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅವಕಾಶ ಕಲ್ಪಿಸುವಂತೆ ಮಾಡಲಾಗಿದೆ. ಆದಾಗ್ಯೂ ಆರ್ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳು ಇರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಜವಾಬ್ದಾರಿಯನ್ನಾಗಿ ಮಾಡಿ ಅಮಾನತುಗೊಳಿಸಲಾಗುವುದು ಎಂದರು.
ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಚೇರಿಯ ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಭೇಟಿ ಮಾಡಿ, ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್ಟಿಒ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕಲ್ ಬಸ್‍ಗಳ ಹಂಚಿಕೆಗೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆ ಮಾಡಲಾದ ಎಲೆಕ್ಟ್ರಿಕ್ ಬಸ್‍ಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಸಾರ್ವಜನಿಕ ಸುಗಮ ಸಂಚಾರಕ್ಕೆ ಎಲೆಕ್ಟ್ರಿಕ್ ಬಸ್‍ಗಳ ವ್ಯತ್ಯಯ ಉಂಟಾದಾಗ ಸಂಸ್ಥೆಯ ಡಿಸೇಲ್ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ಷಮತೆಯನ್ನು ಸಾಧಿಸದ ಅಂಶಗಳಿಗೆ ಕರಾರು ಒಪ್ಪಂದದಲ್ಲಿ ದಂಡ ವಿಧಿಸಲಾಗಿದೆ ಎಂದರು.
2023 ಜನವರಿಯಿಂದ ಇಲ್ಲಿಯವರೆಗೆ ಕಾರ್ಯಾಚರಣೆ ಸಮಯದಲ್ಲಿ ಆಕಸ್ಮಿಕವಾಗಿ ವಿವಿಧ ಕಾರಣಗಳಿಂದ ಒಟ್ಟು 477 ಬಾರಿ ಬಸ್ಸುಗಳಿಗೆ ಅವಘಡ ಸಂಭವಿಸಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಪರ್ಯಾಯ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಬಿಎಂಟಿಸಿಗೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ 1,221 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಯಲ್ಲಿರುತ್ತವೆ. 2023-24 ರಿಂದ 2025 ಸೆಪ್ಟಂಬರ್ ವರೆಗೆ ಬ್ಯಾಟರಿ ದೋಷಗಳಿಂದ 14,082 ಬಾರಿ ಹಾಗೂ ಇನ್ನಿತರ ದೋಷದಿಂದ 2049 ಬಾರಿ ಅಪಘಾತಕ್ಕೀಡಾಗಿರುತ್ತವೆ. ಸಾರ್ವಜನಿಕ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕಂಪನಿಯವರು ಈ ಬಸ್ಸುಗಳನ್ನು ದುರಸ್ತಿಗೊಳಿಸಿ ಕಾರ್ಯಾಚರಣೆಗೆ ನೀಡಿದ್ದಾರೆ ಎಂದು ಹೇಳಿದರು.


