ನನ್ನ ನಿಯತ್ತು ಕಾಂಗ್ರೆಸ್ ಗೆ, ಸಿಎಂಗೆ: ಬೈರತಿ ಸುರೇಶ್
ವಿಧಾನಸಭೆ: ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ಮಾಡಿದ ಟೀಕೆಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ತಿರುಗೇಟು ನೀಡಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡ ಅಶೋಕ ಅವರು, ಕಿಂಗ್ ಈಸ್ ಅಲೈವ್ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಸಚಿವರು, ಮಾಧ್ಯಮದವರು ನಮ್ಮ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ನಮ್ಮ ಮುಖ್ಯಮಂತ್ರಿಗಳು ಗಟ್ಟಿಮುಟ್ಟಾಗಿದ್ದಾರೆ. ಕಿಂಗ್ ಈಸ್ ಅಲೈವ್, ಹೀಗಿರುವಾಗ ಪರ್ಯಾಯ ನಾಯಕತ್ವದ ಬಗ್ಗೆ ಪ್ರಸ್ತಾಪ ಮಾಡುವುದು ಅಪ್ರಸ್ತುತ. ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿಗಳೇ ತೆಗೆದುಕೊಳ್ಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಣ್ಣ ತಮ್ಮಂದಿರಂತೆ ಇದ್ದಾರೆ. ಅಶೋಕ ಮತ್ತು ಬಿ.ವೈ.ವಿಜಯೇಂದ್ರ ಅವರು ಅಣ್ಣ ತಮ್ಮಂದಿರಂತೆ ಇದ್ದಾರಾ? ಎಂದು ಸುರೇಶ್ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ನನ್ನ ನಿಯತ್ತು ಸಿದ್ದರಾಮಯ್ಯ ಸಾಹೇಬ್ರಿಗೆ, ಕಾಂಗ್ರೆಸ್ ಪಕ್ಷಕ್ಕೆ ಎಂದು ಗಟ್ಟಿಧ್ವನಿಯಲ್ಲಿ ಹೇಳಿದ ಸಚಿವ ಸುರೇಶ್ ಅವರು, ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಿ. ನಮ್ಮದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಷ್ಠೆ ತೋರಿಸುವುದನ್ನು ಬಿಟ್ಟು ಆರ್.ಅಶೋಕ್ ಅವರಿಗೆ ತೋರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.


