ಶ್ರವಣಬೆಳಗೊಳ: ಸಮೀಪದ ಕೆ.ಹೊಸಹಳ್ಳಿ ಗ್ರಾಮದ ಹೇಮಾವತಿ ನಾಲೆಯಲ್ಲಿ ವಯೋವೃದ್ಧರ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಚನ್ನರಾಯಪಟ್ಟಣ ಸಮೀಪದ ಕೆರೆ ಚಿಕ್ಕೇನಹಳ್ಳಿಯ ಕಾಳೇಗೌಡ ಎಂದು ಗುರುತಿಸಲಾಗಿದೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿದ್ದು, ಅವರು ನವೆಂಬರ್24 ರಿಂದ ನಾಒತ್ತೆಯಾಗಿದ್ದರು ಎಂದು ಹೇಳಲಾಗಿದೆ.
ಈ ಸಂಬಂಧ ಕುಟುಂಬಸ್ಥರು ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು, ಅನುಮಾನಗೊಂಡು ನಾಲೆಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ. ವ್ಯಕ್ತಿ ಮೃತಪಟ್ಟು, ಈಗಾಗಲೇ ಹಲವು ದಿನಗಳಾಗಿದ್ದು, ಶವ ನೀರಿನಲ್ಲಿಯೇ ಕೊಳೆತು ಹೋಗಿದೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
