ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನೂತನ RTO ಕಚೇರಿ ಹಾಗೂ ಚಾಲನಾ ಪಥವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿದರು.
ನಗರದ ಹುಣಸೀಕಟ್ಟೆ ರಸ್ತೆಯಲ್ಲಿ 4.33 ಎಕರೆ ಜಾಗದಲ್ಲಿ ನೂತನವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಚಾಲನಾ ಪಥವನ್ನು10.5. ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುಸಜ್ಜಿತ ಕಟ್ಟಡವನ್ನು ಸಚಿವರು ಉದ್ಘಾಟನೆ ಮಾಡಿ, ನಂತರ ಹೊಸ ಬಸ್ ನಿಲ್ದಾಣದ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರ ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ನಿಲ್ದಾಣಕ್ಕೆ ಜಾಗ ನಿಗದಿ ಮಾಡಿರುವ ಕುರಿತು ಹೇಳಿದ್ದಾರೆ. ಈ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಎಲೆಕ್ಟ್ರಿಕ್ ಬಸ್ ಗಳನ್ನು ನಗರ ಪ್ರದೇಶಗಳಲ್ಲಿ ಮಾತ್ರ ಓಡಿಸಲಾಗುತ್ತದೆ. ಆದರೆ, ರಾಣೆಬೆನ್ನೂರಿಗೆ ಬಸ್ ನೀಡುವಂತೆ ಕೇಳಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಚಾಲನಾ ಪರವಾನಗಿ ನೀಡುವಾಗ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಂಡರೆ ಅಪಘಾತಗಳನ್ನು ಕಡಿಮೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಪರವಾಮಗಿ ನೀಡುವಾಗ ಜನರಿಗೆ ಅಗತ್ಯ ತರಬೇತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
