ನವದೆಹಲಿ: ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದವರು, ಮುಂದೆ ಉನ್ನತ ಹುದ್ದೆಗೆ ಪದೋನ್ನತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಇದು ಅವರ ಹಕ್ಕೂ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸ್ವೀಪರ್ ಆಗಿ ನೇಮಕಗೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಕಿರಿಯ ಸಹಾಯಕ ಹುದ್ದೆಗೆ ಬಡ್ತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೃತರ ಹೆಸರಿನಲ್ಲಿ ಅವಲಂಬಿತರು ಹುದ್ದೆ ಪಡೆದ ಬಳಿಕ ಬೇಡಿಕೆ ಈಡೇರಿದಂತೆ. ಅವರು ಉನ್ನತ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಹೀಗೆ ನೀಡುತ್ತಾ ಹೋದರೆ, ಅನುಕಂಪಕ್ಕೆ ಅಂತ್ಯವೇ ಇಲ್ಲದಂತಾಗುತ್ತದೆ. ಅನುಕಂಪದ ಮೇಲೆ ಪಡೆದ ಸೌಲಭ್ಯವನ್ನು ಉನ್ನತೀಕರಿಸಿಲು ಸಾಧ್ಯವಿಲ್ಲ ಎಂದು ಪೀಠವು ಕಟ್ಟುನಿಟ್ಟಾಗಿ ಹೇಳಿದೆ.
ತನ್ನ ಶ್ರಮದ ಮೇಲೆ ಹುದ್ದೆ ಪಡೆದುಕೊಂಡ ವ್ಯಕ್ತಿಯ ಹೆಸರಿನಲ್ಲಿ (ಅನುಕಂಪ) ಅವರ ಅವಲಂಬಿತರು ಪಡೆದುಕೊಂಡರೆ, ನಿಜವಾದ ವ್ಯಕ್ತಿಗೆ ಏನೆಲ್ಲಾ ಸೌಲ್ಯಭ್ಯಗಳು ಸಿಗುತ್ತವೆಯೇ ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅನುಕಂಪದ ಹುದ್ದೆ ಆ ಕುಟುಂಬವು ಆರ್ಥಿಕ ನಷ್ಟ ಅನುಭವಿಸದಂತೆ ತಡೆಯುವ ಸಾಧನವಾಗಿದೆ. ಇದನ್ನೇ ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ವಾಕ್ಯಗಳಲ್ಲಿ ವಿವರಿಸಿದೆ.
ಅನುಕಂಪದ ಆಧಾರದ ನೇಮಕಾತಿ ಸಂಪೂರ್ಣವಾಗಿ ಮಾನವೀಯ ಆಧಾರದ ಮೇಲೆ ಇರುತ್ತದೆ. ಹುದ್ದೆ ಪಡೆದವರಿಗೆ ಹೆಚ್ಚಿನ ಅರ್ಹತೆ ಇದೆ ಎಂಬ ಕಾರಣಕ್ಕೆ ಅವರನ್ನು ಉನ್ನತ ಹುದ್ದೆಗೆ ಪದೋನ್ನತಿ ನೀಡಲು ಅವಕಾಶವಿಲ್ಲ. ಅವರು ಏನೇ ಅರ್ಹತೆ ಹೊಂದಿದ್ದರೂ, ಅದು ಅನುಕಂಪದ ಆಧಾರದ ಮೇಲೆ ಪಡೆದ ಹುದ್ದೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪೀಠವು ಹೇಳಿದೆ.
ಅನುಕಂಪದ ಆಧಾರದ ಹುದ್ದೆ ಸಾಮಾನ್ಯ ನೇಮಕಾತಿಗಳಿಗಿಂತ ಭಿನ್ನ. ಸಂವಿಧಾನದ 14 ಮತ್ತು 16 ನೇ ವಿಧಿಗಳ ಪ್ರಕಾರ, ಸರ್ಕಾರಿ ಹುದ್ದೆಗಳಿಗೆ ಎಲ್ಲಾ ಆಕಾಂಕ್ಷಿಗಳಿಗೆ ಸಮಾನ ಅವಕಾಶ ಒದಗಿಸಬೇಕು. ಸೇವೆಯಲ್ಲಿರುವ ನೌಕರನ ಮರಣದ ನಂತರ, ಅವಲಂಬಿತ ಕುಟುಂಬ ಸದಸ್ಯರಿಗೆ ಅವರು ಅರ್ಜಿ ಸಲ್ಲಿಸಿದ ಹುದ್ದೆಗೆ ಮಾತ್ರ ನೇಮಕಾತಿ ಮಾಡಲಾಗುತ್ತದೆ. ಈ ನೇಮಕಾತಿ ವೇಳೆ ಯಾವುದೇ ಆಕ್ಷೇಪಣೆ ಇಲ್ಲದೆ ಹುದ್ದೆಗೆ ಸೇರಿರುತ್ತಾರೆ ಎಂದು ಪೀಠವು ಸ್ಪಷ್ಟಪಡಿಸಿದೆ.
