ಬೆಂಗಳೂರು: ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಅತ್ಯಗತ್ಯ. ಹಾಗಾಗಿ ಎಲ್ಲರೂ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ ಗೋಪಾಲಯ್ಯ ಸಲಹೆ ನೀಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ಆತ್ರೇಯ ಶಾಲೆಯ ಆವರಣದಲ್ಲಿ ಹಿರಿಯ ನಾಗರೀಕರಿಗಾಗಿ ವಿಶೇಷವಾಗಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿ.ಪಿ, ಶುಗರ್, ಕಂಪ್ಲೀಟ್ ಬ್ಲಡ್ ಟೆಸ್ಟ್, ಇಸಿಜಿ, ಎಕೊ, ಕಣ್ಣಿನ ಪೊರೆಯಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನೂ ಹಲವು ಸೌಲಭ್ಯ ಹಾಗೂ ತಪಾಸಣೆಯನ್ನು ಮಾಡಲಾಗುತ್ತಿದೆ. ಈ ಶಿಬಿರದಲ್ಲಿ ವಯಸ್ಕ ದಂಪತಿಗಳಿಬ್ಬರೂ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಶಿಬಿರವನ್ನು ಎಲ್ಲರೂ ಸದ್ಬಳಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನ ನಡೆಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಮಂಜುನಾಥ್ ಗೌಡ, ಶ್ರೀ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಜಯರಾಮ್, ಮಂಡಲದ ಅಧ್ಯಕ್ಷ ಡಾ.ನಾಗೇಂದ್ರ, ಕಾರ್ಯದರ್ಶಿಗಳಾದ ನಿಸರ್ಗ ಜಗದೀಶ್, ಅವಿನ್ ಆರಾಧ್ಯ, ವಾರ್ಡ್ ಅಧ್ಯಕ್ಷ ಮಂಜುನಾಥ್, ಸ್ಥಳೀಯ ಮುಖಂಡರಾದ ವೆಂಕಟೇಶ್, ಶ್ರೀನಿವಾಸ್, ವೆಂಕಟೇಶ್ ಮೂರ್ತಿ, ಶಿವಾನಂದಮೂರ್ತಿ, ಗಂಗಾ ಹನುಮಯ್ಯ, ಹಾಗೂ ಇತರರು ಹಾಜರಿದ್ದರು.

