ಮತ್ತೊಂದು ವಾರ ಅಧಿವೇಶನ ವಿಸ್ತರಣೆಗೆ ಸ್ಪೀಕರ್ ಗೆ ಪತ್ರ ಬರೆದ ವಿಪಕ್ಷ ನಾಯಕ ಆರ್.ಅಶೋಕ್

Share It

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳು, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ ಆಗಬೇಕಿರುವುದರಿಂದ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್​ ಅವರಿಗೆ ಪತ್ರ ಬರೆದಿದ್ದಾರೆ.

ಡಿಸೆಂಬರ್‌ 8ರಿಂದ 19ರ ವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ ಎರಡು ದಿನ ಮೊಟಕುಗೊಂಡಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಯಾಗಬೇಕು. ಈ ಹಿನ್ನೆಲೆಯಲ್ಲಿ ಅಧಿವೇಶವನ್ನು ಒಂದು ವಾರ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಶಾಸಕರು ಪ್ರಸ್ತಾಪ ಮಾಡಿರುವ ಹಲವು ಗಂಭೀರ ವಿಷಯಗಳಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್ನೂ ಉತ್ತರ ನೀಡಬೇಕಿದೆ. ಇದರ ಜೊತೆಗೆ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುದಾನ ಬಳಕೆಯ ಕಳಪೆ ಸಾಧನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಶಾಸಕರಿಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ಪಡಿತರ ಚೀಟಿಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಟೀಕಿಸಿದ್ದಾರೆ.

ಕರ್ನಾಟಕದಾದ್ಯಂತ ಪಡಿತರ ಚೀಟಿಗಾಗಿ ಸಲ್ಲಿಸಿರುವ 3.22 ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ. ಅವುಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮತ್ತು ಬೆಂಗಳೂರಿನಿಂದ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಆದ್ದರಿಂದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವ ಬಗ್ಗೆ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


Share It

You May Have Missed

You cannot copy content of this page