ಕಲೆಕ್ಷನ್ ಕಿಂಗ್ ವಿಜಯೇಂದ್ರ; ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: “ಕಲೆಕ್ಷನ್ ಕಿಂಗ್ ಎಂದು ಏನಾದರೂ ಇದ್ದರೆ ಅದು ವಿಜಯೇಂದ್ರ. ಅವರ ತಂದೆ ಹೆಸರು ಇಳಿಯಲು ವಿಜಯೇಂದ್ರ ಕಾರಣ. ಇದನ್ನ ಮರೆಯಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು.
ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಅನ್ನು ತೃಪ್ತಿಪಡಿಸಲಾಗುತ್ತಿದೆ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ವಿಜಯೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ, “ಯಾವ ಖಜಾನೆ ಖಾಲಿಯಾಗಿದೆ? ಕಲೆಕ್ಷನ್, ಅವರ ಅಕೌಂಟ್ ಗಳು, ವಹಿವಾಟುಗಳನ್ನು ಬಿಚ್ಚಿಡಬೇಕೆ?” ಎಂದರು.
ತಪ್ಪಿಸಿಕೊಂಡು ಎಲ್ಲೋ ಹೋಗದೆ ವಿಧಾನಸಭೆಯಲ್ಲಿ ಮಾತನಾಡಲಿ: “ಅವರು ವಿಧಾನಸಭೆಯಲ್ಲಿ ಮಾತನಾಡಿದರೆ ಏನೇನು ಮಾತನಾಡಬೇಕು ಎಂದು ನನಗೂ ಗೊತ್ತಿದೆ. ಪಕ್ಷದ ಅಧ್ಯಕ್ಷರಾಗಿ ಇತಿಮಿತಿಯಿಂದ ಮಾತನಾಡಲಿ. ಮೊದಲು ವಿಧಾನಸಭೆಗೆ ಬಂದು ಮಾತನಾಡಲು ಹೇಳಿ. ತಪ್ಪಿಸಿಕೊಂಡು ಹೋಗಿ ಎಲ್ಲೋ ಇರುವುದಲ್ಲ. ಇಲ್ಲಿ ಬಂದು ಮಾತನಾಡಲಿ. ವಿಜಯೇಂದ್ರ ಅವರಿಗೆ ಅನುಭವವಿಲ್ಲ. ಯಾವ ಖಜಾನೆ ಖಾಲಿಯಾಗಿದೆ?” ಎಂದು ಕುಟುಕಿದರು.


