ಭೀಕರ ಅಪಘಾತ : ರಾಜಧಾನಿ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದು ಎಂಟು ಕಾಡಾನೆಗಳು ಸಾವು
ಗುವಾಹಟಿ (ಅಸ್ಸಾಂ): ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಕಾಡಾನೆಗಳು ಸಾವನ್ನಪ್ಪಿದ್ದು, ಒಂದು ಆನೆ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಹೋಜಾಯಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಆನೆಗಳ ಹಿಂಡು ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಸಾಯಿರಂಗ್-ನವದೆಹಲಿ ನಡುವಿನ ರಾಜಧಾನಿ ಎಕ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ದುರಂತ ನಡೆದಿದೆ. ಡಿಕ್ಕಿ ರಭಸಕ್ಕೆ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ. ಆದರೆ, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ.
ಶನಿವಾರ ನಸುಕಿನ ಜಾವ ೨:೧೭ಕ್ಕೆ ಹೋಜಾಯಿ ಜಿಲ್ಲೆಯ ಚಾಂಗ್‌ಜುರಾಯಿ ಬಳಿ ಅವಘಡ ನಡೆದಿದೆ ಎಂದು ನಾಗೌನ್ ವಲಯ ಅರಣ್ಯಾಧಿಕಾರಿ ಸುಹಾಸ್ ಕದಂ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕದಂ ಸೇರಿ ಇತರೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಅಪಘಾತದಿಂದಾಗಿ ಜಮುನಾಮುಖ್-ಕಂಪುರ ವಿಭಾಗದ ಮೂಲಕ ತೆರಳುವ ರೈಲುಗಳನ್ನು ಉತ್ತರ ಪ್ರದೇಶ ಮಾರ್ಗದ ಮೂಲಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ರೈಲ್ವೆ ಹಳಿ ತಪ್ಪಿರುವ ಬೋಗಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.


