ಪೆಟ್ರೋಲ್ ಸುರಿದುಕೊಂಡ ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
ಕಲಬುರಗಿ: ಬಿಜೆಪಿ ಕಾರ್ಯಕರ್ತೆಯೊಬ್ಬರು, ಪಕ್ಷದ ಮತ್ತೊಬ್ಬ ಕಾರ್ಯಕರ್ತನ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಂದಿಕೂರಲ್ಲಿ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತೆ ಮೃತ ದುರ್ದೈವಿ. ಆಕೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬೀರೇದಾರ್ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಲ್ಲಿನಾಥ್ ಮನೆಯಲ್ಲಿ ಇಲ್ಲದಿರುವಾಗ ಆಗಮಿಸಿದ ಜ್ಯೋತಿ ಮನೆಯ ಬಾಗಿಲು ಬಡಿದರು ಎನ್ನಲಾಗಿದೆ. ಈ ವೇಳೆ ಆತನ ಪತ್ನಿ ಬಾಗಿಲು ತೆಗೆದಿದ್ದಾರೆ. ಈ ವೇಳೆ ಏಕಾಏಕಿ ಪೆಟ್ರೋಲ್ ಸರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಗಾಬರಿಗೊಂಡ ಮಲ್ಲಿನಾಥ್ ಪತ್ನಿ ಕೂಗಿಕೊಂಡಾಗ ಅಕ್ಕಪಕ್ಕದವರು ಬಂದು ಆಕೆಯನ್ನು ಬದುಕಿಸುವ ಪ್ರಯತ್ನ ನಡೆಸಿದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ ಪಾಟೀಲ್ ಸಾವನ್ನಪ್ಪಿದ್ದು, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


