ಮೊಬೈಲ್, ಟಿವಿ ಬಳಸದ ಮಾದರಿ ಗ್ರಾಮ: ಸೈರನ್ ಕೂಗುತ್ತಿದ್ದಂತೆ ಸ್ವಿಚ್ಡ್ ಆಫ್ !
ಬೆಳಗಾವಿಯ ಹಲಗಾ ಗ್ರಾಮಸ್ಥರಿಂದ ಮಕ್ಕಳ ವಿದ್ಯಾಭ್ಯಾಸದ ಸಲುವಾದ ವಿನೂತನ ಕ್ರಮ
ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಗ್ರಣ ಧೂಳ ಗ್ರಾಮದಲ್ಲಿ ಅಲ್ಲಿಯ ನಾಗರಿಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ ಪ್ರತಿದಿನ ಸಂಜೆ 7-9 ರ ವರೆಗೆ ಪ್ರತಿ ದಿನ 2 ಗಂಟೆ ಹೊತ್ತು ಮೊಬೈಲ್ ಮತ್ತು ಟಿವಿ ಬಳಕೆಗೆ ನಿರ್ಬಂಧ ವಿಧಿಸಿದ್ದಾರೆ. ಇದು ಈಗ ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಹೊಂದಿಕೊಂಡ ಹಲಗಾ ಗ್ರಾಮಸ್ಥರಿಗೂ ಸಹ ಇದು ಪ್ರೇರಣೆಯಾಗಿದೆ. ಈ ಗ್ರಾಮದಲ್ಲೂ ಸಹ ಸಂಜೆ ಹೊತ್ತು ಮೊಬೈಲ್ ಮತ್ತು ಟಿವಿ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ ಗೆಜಪತಿ ಅವರು, ಗ್ರಾಮ ಪಂಚಾಯಿತಿ ಕಚೇರಿ ಬಳಿ ಇರುವ ಸೈರನ್ ಪ್ರತಿದಿನ ಸಂಜೆ 7:00 ಮೊಳಗುತ್ತದೆ. ಸೈರನ್ ಮೊಳಗಿದ ತಕ್ಷಣ ಎಲ್ಲರ ಮೊಬೈಲ್, ಟಿವಿ ಆಪ್ ಆಗುತ್ತದೆ. ಎಲ್ಲರೂ ಈ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಮೊಬೈಲ್ ಫೋನ್ ಮತ್ತು ಟಿವಿ ಬಳಕೆಯನ್ನು ನಿಲ್ಲಿಸಲು ಗ್ರಾಮಸ್ಥರಿಗೆ ಕೋರಿದ್ದು ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮಸ್ಥರು ಸಹ ಇದಕ್ಕೆ ಅಭೂತಪೂರ್ವ ಬೆಂಬಲ ಬೆಂಬಲ ಸೂಚಿಸಿದ್ದು ಮಕ್ಕಳಲ್ಲಿ ಓದುವ ಹವ್ಯಾಸ ವೃದ್ಧಿಸಲು ಮೊಬೈಲ್ ಮತ್ತು ಟಿವಿ ಅನ್ನು ಸಂಜೆ ಹೊತ್ತು ನಿಲುಗಡೆಗೊಳಿಸಲು ಸಹಕರಿಸಿದ್ದಾರೆ.
ಈ ಗ್ರಾಮದಲ್ಲಿ ಅಂದಾಜು 1,452 ಮನೆಗಳಿವೆ. ಇತ್ತೀಚಿನ ದಿನಗಳಲ್ಲಿ ಮನೆಯ ಪ್ರತಿಯೊಬ್ಬರ ಮನೆಯಲ್ಲಿ ಮೊಬೈಲ್ ಬಳಕೆ ಸಾಮಾನ್ಯ. ಟಿವಿ ಸಹ ಇದೆ. ಹೀಗಾಗಿ ಮಕ್ಕಳು ಫೋನ್ ಬಳಕೆ ಮಾಡುವುದು, ಟಿವಿ ವೀಕ್ಷಣೆ ಸಾಮಾನ್ಯವಾಗಿದೆ. ಅವರ ವಿದ್ಯಾಭ್ಯಾಸದ ದೃಷ್ಟಿಯಿಂದ ಈಗ ಸಂಜೆ ಹೊತ್ತು ಈ ಎರಡು ತಂತ್ರಜ್ಞಾನವನ್ನು ಕೆಲವೊಂದು ಸ್ಥಗಿತಗೊಳಿಸಲು ಗ್ರಾಮಸ್ಥರು ಮುಂದಾಗಿರುವುದು ಇಡೀ ನಾಡಿನಲ್ಲಿ ಶ್ಲಾಘನೆ ವ್ಯಕ್ತವಾಗಿದೆ.


