ಗುಂಡ್ಲುಪೇಟೆ: ತೋಟದಲ್ಲಿ ಕಾಣಿಸಿಕೊಂಡ ಹುಲಿ ಸೆರೆ: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿರಾಯ
ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಕ್ತಿ ಕಾಲೊನಿ ಗ್ರಾಮದ ಲೋಕೇಶ್ ಎಂಬವರ ಬಾಳೆತೋಟದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಹುಲಿ ಕಾಣಿಸಿಕೊಂಡು ಘರ್ಜಿಸುತ್ತಾ ಬೀಡುಬಿಟ್ಟಿತ್ತು. ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ವಲಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ, ಸಂಜೆಯ ಹೊತ್ತಿಗೆ ಸೆರೆ ಹಿಡಿದಿದ್ದಾರೆ.
ಬಂಡೀಪುರದ ಪಶು ವೈದ್ಯ ಡಾ.ಮಿರ್ಜಾ ವಾಸಿಂ ಅರಿವಳಿಕೆ ಚುಚ್ಚುಮದ್ದು ಕೊಟ್ಟ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಡ್ರೋನ್ ಮೂಲಕ ಹುಲಿಗಳ ಪತ್ತೆ : ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಾಗುತ್ತಿದ್ದಂತೆ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದೆ. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬಂಡೀಪುರ ಅರಣ್ಯ ಸಿಬ್ಬಂದಿ ಹಾಗೂ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದ ಸುತ್ತಮುತ್ತ ಬಿಆರ್ಟಿ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭೀಮನಬೀಡು ಗ್ರಾಮದ ಸಿದ್ದಶೆಟ್ಟಿ ಎಂಬವರಿಗೆ ಸೇರಿದ ಎರಡು ಹಸುಗಳು ಶುಕ್ರವಾರ ಬಾಳೆ ತೋಟದಲ್ಲಿ ಮೇಯುತ್ತಿದ್ದಾಗ ಹುಲಿ ದಾಳಿ ಮಾಡಿತ್ತು. ಒಂದು ಹಸುವಿನ ಮುಂದಿನ ಕಾಲು, ಮತ್ತೊಂದರ ಹಿಂಬದಿ ಕಾಲನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ಒಂದು ವಾರದಿಂದ ಭೀಮನಬೀಡು ಸುತ್ತ ಹುಲಿ ಉಪಟಳ ಹೆಚ್ಚಿದ್ದು ಜಾನುವಾರು, ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಕೂಂಬಿಂಗ್ ನಡೆಸುವ ಮೂಲಕ ಹುಲಿ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದರು.


